ರೌಡಿ ರಂಗ ಮತ್ತು ಆತನ 11 ಆನೆಗಳ ನಟೋರಿಯಸ್‌ ಗ್ಯಾಂಗ್‌!

ಅದು ಹಲವಾರು ವರ್ಷಗಳಿಂದ ಒಟ್ಟಿಗೆ ಇದ್ದ 11 ಗಂಡುಗಳ ಗ್ಯಾಂಗ್​​. ಆ ಗ್ಯಾಂಗ್​ ಹೋದಲೆಲ್ಲಾ ದಾಂಧಲೆ, ಧ್ವಂಸ. ಆಹಾರ, ನೀರಿಗಾಗಿ ಈ ಗ್ಯಾಂಗ್​ ಸಿಕ್ಕಸಿಕ್ಕ ಕಡೆ ದಾಳಿ ಮಾಡ್ತಿತ್ತು. ಅಲ್ಲದೆ ಈ ಗ್ಯಾಂಗ್​​ಗೆ ಎಲ್ಲೆಲ್ಲಿ ಹೆಣ್ಣಿರುತ್ತವೆ ಅನ್ನೋದೂ ಗೊತ್ತಿತ್ತು. ಇದೇನಿದು ಯಾವುದೋ ರೌಡಿಗಳ ಗ್ಯಾಂಗ್​ ಬಗ್ಗೆ ಇಷ್ಟೊಂದು ಬಿಲ್ಡಪ್​ ಯಾಕೆ ಅಂತ ಅನ್ನಿಸ್ತಿದ್ಯಾ? ನಾವು ಹೇಳ್ತಿರೋದು ಮನುಷ್ಯರ ಗ್ಯಾಂಗ್​​ ಬಗ್ಗೆ ಅಲ್ಲ, ರೌಡಿಗಳನ್ನೂ ಮೀರಿಸೋ ಆನೆಗಳ ಗ್ಯಾಂಗ್​​ ಬಗ್ಗೆ.

ಹೌದು… ರೌಡಿ ರಂಗ ಎಂದೇ ಫೇಮಸ್​ ಆಗಿದ್ದ ಆನೆ, ಬಸ್​ ಅಪಘಾತದಲ್ಲಿ ಸಾವನ್ನಪ್ಪಿದೆ. ಈ ರೌಡಿ ರಂಗ 11 ಗಂಡಾನೆಗಳ ಗ್ಯಾಂಗ್​​ಗೆ ಬಾಸ್​​ ಆಗಿದ್ದವನು​. 17 ವರ್ಷಗಳಲ್ಲಿ ರಂಗನ ಗ್ಯಾಂಗ್ ಬೆಳೆಗಳನ್ನ ನಾಶ ಮಾಡುತ್ತಾ ​ ತಮ್ಮದೇ ಅಡ್ಡ ಸೃಷ್ಟಿಸಿಕೊಂಡಿದ್ದಷ್ಟೇ ಅಲ್ಲ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹೆಣ್ಣಾನೆಗಳನ್ನೇ ತನ್ನತ್ತಾ ಸೆಳೆಯುತ್ತಿದ್ದವು ಅಂದ್ರೆ ನಂಬಲೇಬೇಕು. ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಹೆಣ್ಣಾನೆಗಳನ್ನ ಓಡಾಡಲು ಬಿಟ್ಟಿದ್ದರೆ ರಂಗನ ಗ್ಯಾಂಗ್​ ಅಲ್ಲಿಗೆ ಲಗ್ಗೆ ಇಟ್ಟು ಹೆಣ್ಣಾನೆಗಳ ಜೊತೆ ಮಿಲನದಲ್ಲಿ ತೊಡಗುತ್ತಿದ್ದವು.

ಗಂಡಾನೆಗಳು ಗ್ಯಾಂಗ್​​ ಮಾಡಿಕೊಳ್ಳಲು ಕಾರಣವೇನು?
ಏಷ್ಯಾಟಿಕ್ ಹಾಗೂ ಆಫ್ರಿಕನ್ ಆನೆಗಳು ಸಾಮಾನ್ಯವಾಗಿ ಮಾತೃಪ್ರಧಾನ ಸಮಾಜದಲ್ಲಿ ಬದುಕುತ್ತವೆ. ಇಲ್ಲಿ ಅತ್ಯಂತ ಹಿರಿಯ ಹೆಣ್ಣಾನೆ ಗುಂಪಿನ ಮುಖ್ಯಸ್ಥಳಾಗಿರುತ್ತದೆ. ಹಾಗೇ ಅದರ ಹೆಣ್ಣು ಮರಿಗಳು ಹಿಂಡಿನ ಜೊತೆ ಇರುತ್ತವೆ. ಗಂಡು ಆನೆಮರಿಗಳನ್ನ ತಾಯಿ ಸಾಕಿ, ಬೆಳೆಸಿದ ನಂತರ ತನ್ನ ಕುಲದಿಂದ ಹೊರಗೆ ಕಳಿಸಲಾಗುತ್ತದೆ. ಹೀಗಾಗಿ ಗಂಡಾನೆಗಳು ತಾವಾಗಿಯೇ ಬೇರೊಂದು ಕುಲವನ್ನು ಹುಡುಕಿಕೊಳ್ಳಬೇಕು. ತನ್ನ ಕುಲದಲ್ಲೇ ಇನ್​​​ ಬ್ರೀಡಿಂಗ್​​(ಸಂತಾನೋತ್ಪತ್ತಿ) ಆಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ. ಹೀಗಾಗಿ ಗಂಡಾನೆಗಳು ಯೌವನಾವಸ್ಥೆಗೆ ಬಂದಾಗ ಗುಂಪಿನಿಂದ ದೂರವಾಗುತ್ತವೆ. ಈ ವೇಳೆ ಬೇರೊಂದು ಕುಲ ಸಿಗುವವರೆಗೂ ತಾತ್ಕಾಲಿಕವಾಗಿ ‘ಬ್ಯಾಚುಲರ್​​ ಗ್ರೂಪ್’​​ಗಳನ್ನ ಮಾಡಿಕೊಳ್ಳುತ್ತವೆ. ಇನ್ನು ಈ ಆನೆಗಳು ಬೇರೊಂದು ಕುಲವನ್ನು ಸೇರಿಕೊಳ್ಳಬೇಕಾದ್ರೆ ವೇಯ್ಟಿಂಗ್​ ಪೀರಿಯಡ್​ ಕೂಡ ಇರುತ್ತದೆ. ಯಾಕಂದ್ರೆ ಬೇರೊಂದು ಕುಲದಲ್ಲಿ ಗಂಡಾನೆಯ ಅಗತ್ಯವಿದ್ದಾಗ ಮಾತ್ರ ಅವನ್ನು ಗುಂಪಿಗೆ ಸೇರಿಸಿಕೊಳ್ಳಲಾಗುತ್ತದೆ. ಅದೂ ಮಿಲನ ಕ್ರಿಯೆಗೆ ಎಷ್ಟು ಹೆಣ್ಣಾನೆಗಳು ಸಿದ್ಧವಿವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತವೆ. ಇನ್ನು ಸ್ವಾಭಾವಿಕವಾಗಿ ಒಂಟಿಯಾಗಿರುವ ಗಂಡಾನೆಗಳು ಕುಲವನ್ನು ಸೇರಿಕೊಂಡ ನಂತರ ಹೆಣ್ಣಾನೆಯೊಂದಿಗೆ ಸಂಭೋಗ ನಡೆಸಿ ಮತ್ತೆ ತಮ್ಮ ಪಾಡಿಗೆ ಏಕಾಂತದ ದಾರಿ ಹಿಡಿದು ಹೋಗುತ್ತವೆ.

ಇಷ್ಟೆಲ್ಲಾ ಡೀಟೇಲ್ಸ್​ ಹೇಳಿದ್ದು ಯಾಕಪ್ಪ ಅಂದ್ರೆ ರೌಡಿ ರಂಗನ ಗ್ಯಾಂಗ್​​​ಗೆ ಯಾವುದೇ ಕುಲಕ್ಕೆ ಎಂಟ್ರಿ ಸಿಕ್ಕಿರಲಿಲ್ಲ. ಹೀಗಾಗಿ ಈ ಗ್ಯಾಂಗ್​​​ ತಮ್ಮದೇ ಗುಂಪು ಕಟ್ಟಿಕೊಂಡು ಆರಾಮಾದ ಜೀವನ ನಡೆಸುತ್ತಿದ್ದವು.

ಇನ್ನು ಈ ರಂಗನ ಗ್ಯಾಂಗ್​​ಗೆ ಸರ್ಕಾರದ ನಿಯಮಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅಭಯಾಸ್ತವೂ ಇತ್ತು. ಆನೆಗಳು ಸಾಮಾನ್ಯವಾಗಿ ತಮ್ಮ ಹಿರಿಯರು ಹಾಗೂ ಹಿಂದಿನ ತಲೆಮಾರಿನವರು ದಶಕಗಳು ಅಥವಾ ಶತಮಾನಗಳಿಂದ ನಡೆದಾಡಿದ ದಾರಿಯಲ್ಲೇ ಸಾಗುತ್ತವೆ. ಪರಿಸ್ಥಿತಿ ಬದಲಾದರೂ, ಊಟ-ನೀರಿಗೆ ಬರ ಬಂದರೂ ಕೂಡ ಬಹುತೇಕ ಆನೆಗಳು ಇದೇ ಜಾಗಕ್ಕೇ ಅಂಟಿಕೊಂಡಿರುತ್ತವೆ. 1990ರಲ್ಲಿ ರಾಜ್ಯದಲ್ಲಿ ಬರ ಎದುರಾಗಿತ್ತು. 1997ರಲ್ಲಿ ರಾಜ್ಯ ಸರ್ಕಾರ ಹೇಮಾವತಿ ನದಿಯನ್ನು ಕಾಲುವೆ ಮೂಲಕ ಹರಿಸಲು ನಿರ್ಧರಿಸಿತ್ತು. ಇದರಿಂದ ಸುತ್ತಮುತ್ತಲ ಪ್ರದೇಶದ ಕೆರೆ ಕುಂಟೆಗಳಲ್ಲಿ ನೀರು ತುಂಬಿತು. ಅಲ್ಲಿಯವರೆಗೂ ಕೇವಲ ರಾಗಿ ಬೆಳೆಯಲು ಯೋಗ್ಯವಾಗಿದ್ದ ಈ ಪ್ರದೇಶ ಭತ್ತ ಹಾಗೂ ಬಾಳೆ ಬೆಳೆ ಬೆಳೆಯಲು ಯೋಗ್ಯವಾಯ್ತು. ಆಹಾರ ಹಾಗೂ ನೀರಿನ ಈ ಶ್ರೀಮಂತ ಮೂಲವನ್ನ ಸಲಗವೊಂದು ಕಂಡುಕೊಂಡಿತ್ತು. 1999ರಲ್ಲಿ ಇದೇ ಸಲಗ ಮತ್ತೊಂದು ಗಂಡಾನೆಯೊಂದಿಗೆ ಸೇರಿ, ಕುಲಕ್ಕಾಗಿ ಹುಡುಕುತ್ತಿದ್ದ ರಂಗ ಎಂಬ ಆನೆಯ ಸ್ನೇಹ ಬೆಳೆಸಿಕೊಂಡು, ರಾಯಲ್​ ಲೈಫ್​ ಏನು ಅಂತ ತೋರಿಸಿತ್ತು.

ಈಗ ಇದೇ ಪ್ರದೇಶ ಬನ್ನೇರುಘಟ್ಟ, ಕಗ್ಗಲಿಪುರ, ಬಿಎಂ ಕಾವಲ್​​, ರೋರಿಚ್​ ಎಸ್ಟೇಟ್, ನೈಸ್​​ ರೋಡ್​ ಜಂಕ್ಷನ್, ಕುಂಬಳಗೋಡು, ಸಾವನದುರ್ಗ, ಶಿವಗಂಗೆ , ಅಂತರಗಂಗೆ, ದಾಬಸ್​ಪೇಟೆ ಹಾಗೂ ತುಮಕೂರು ಟೌನ್​​ ಮೇಲೆ ಸಾಗುತ್ತದೆ.
ಆನೆಗಳು ಇಷ್ಟು ದೊಡ್ಡ ಪ್ರದೇಶದುದ್ದಕ್ಕೂ ನಡೆದಾಡಿರಲಿಲ್ಲ. ಆದ್ರೆ ಈ ಮೂರು ಆನೆಗಳು ಮಾತ್ರ ಇದನ್ನು ತಮ್ಮ ಅಡ್ಡೆಯಾಗಿ ಮಾಡಿಕೊಂಡಿದ್ದವು. ನೋಡನೋಡುತ್ತಲೇ ರಂಗ ಈ ಗ್ಯಾಂಗ್​​ನ ಲೀಡರ್​​ ಆಗಿ ಬೇರೆ ಆನೆಗಳನ್ನ ಗುಂಪಿಗೆ ಸೇರಿಸಿ ಕೊಳ್ಳತೊಡಗಿದ. ಮೊದಲಿದ್ದ ಎರಡು ಗಂಡಾನೆಗಳು ದೂರವಾಗಿ, ರಂಗನ ತಂಡ 11 ಆನೆಗಳ ಗ್ಯಾಂಗ್​ ಆಯಿತು. ಈ ಗ್ಯಾಂಗ್​​ ಸುತ್ತಮುತ್ತ ಪ್ರದೇಶದ ಬೆಳೆಗಳ ಮೇಲೆ ದಾಳಿ ಮಾಡುತ್ತಾ, ರಾತ್ರಿ ಹೊತ್ತು ದೊಡ್ಡ ನೀರಿನ ಪ್ರದೇಶಗಳಲ್ಲಿ ಅಡಗಿಕೊಳ್ಳುತ್ತಾ ತಮ್ಮದೇ ಹವಾ ಸೃಷ್ಟಿಸಿದ್ದವು.

ಹೆಣ್ಣಾನೆಗಳೇ ಹುಡುಕಿಕೊಂಡು ಬರುವಂತೆ ಮಾಡಿದ್ದ ರಂಗ
ಇನ್ನು ಈ ರಸಿಕ ರಂಗ, ಗಂಡಾನೆಗಳು ಬೇರೆ ಕುಲ ಸೇರಿಕೊಳ್ಳಲಾಗದ ಕಾರಣ ಅದಕ್ಕೊಂದು ಐಡಿಯಾ ಕೂಡ ಮಾಡಿದ್ದ. ಈ ಗ್ಯಾಂಗ್​​ಗೆ ಹೆಣ್ಣಾನೆಗಳು ಸಿಗದಿದ್ದಾಗ, ಅವುಗಳನ್ನ ಹುಡುಕಿ ಹೋಗುವ ಬದಲು ಹೆಣ್ಣಾನೆಗಳೇ ತಮ್ಮ ಬಳಿ ಬರುವವರೆಗೂ ಕಾಯುತ್ತಿದ್ದವು. ಈ ಆನೆಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನೇ ಸಂತಾನೋತ್ಪತ್ತಿಯ ತಾಣವಾಗಿ ಮಾಡಿಕೊಂಡಿದ್ದವು. ಹೆಣ್ಣಾನೆಗಳಿಗೆ ಖಿನ್ನತೆ ಕಡಿಮೆ ಮಾಡಲು ಅರಣ್ಯ ಸಿಬ್ಬಂದಿ ರಾತ್ರಿ ಹೊತ್ತು ಅವುಗಳನ್ನು ಫ್ರೀಯಾಗಿ ಓಡಾಡಲು ಬಿಡುತ್ತಿದ್ದರು. 17 ಹೆಣ್ಣಾನೆಗಳಿದ್ದ ಈ ಗುಂಪಿಗಾಗಿ ರಂಗನ ಟೀಂ ಕಾದಿರುತ್ತಿತ್ತು.

ರಂಗನ ಗ್ಯಾಂಗ್​​ನಲ್ಲಿ ಯಾಱರಿದ್ದರು?
ರಂಗ-ಸುಮಾರು 37 ವರ್ಷ (ಲೀಡರ್), ಮಾಖನ-32 ವರ್ಷ, 20-25 ವರ್ಷದ ಮತ್ತೆರಡು ಆನೆಗಳು, 15-20 ವರ್ಷದ 7 ಆನೆಗಳು ರಂಗನ ಗ್ಯಾಂಗ್​​ನಲ್ಲಿ ಇದ್ದವು ​

ಕಾಲ ಕಳೆದಂತೆ ರಂಗನ ಗ್ಯಾಂಗ್​​ಗೆ ಮತ್ತಷ್ಟು ಆನೆಗಳು ಸೇರ್ಪಡೆಗೊಳ್ಳುತ್ತಿದ್ದದಿಂದ ಆತಂಕ ಹೆಚ್ಚಾಗಿತ್ತು. ಇಲ್ಲಿನ ಜನ ತಮ್ಮ ಬೆಳೆ ಬಗ್ಗೆ ಆತಂಕ ಹೊಂದಿರುತ್ತಿದ್ದರು. ಕೊನೆಗೆ ರೌಡಿ ರಂಗನಿಗೆ 2016ರ ಡಿಸೆಂಬರ್​​ನಲ್ಲಿ ಅಂಕುಶ ಬಿದ್ದಿತ್ತು. ಮಾಗಡಿ ಬಳಿ ರಂಗನನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರು. ಬಳಿಕ 2017ರಲ್ಲಿ ರಂಗನನ್ನು ಪಳಗಿಸಲು ನಾಗರಹೊಳೆ ಹುಲಿ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರಕ್ಕೆ ಕಳಿಸಲಾಗಿತ್ತು. ರಂಗನನ್ನು ಪಳಗಿಸಿದ ನಂತರ ಮತ್ತೆ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗಿತ್ತು. ಈ ವೇಳೆ ದಸರಾ ಆನೆಗಳಾದ ಅರ್ಜುನ ಹಾಗೂ ಅಭಿಮನ್ಯು ರಂಗನನ್ನ ಅದರ ಬೋನಿನಿಂದ ಹೊರಗೆಳೆದು ತಂದಿದ್ದವು. ಈ ಬಾರಿಯ ದಸರಾದಲ್ಲಿ ರಂಗ ಕೂಡ ಪಾಲ್ಗೊಳ್ಳಬೇಕಿತ್ತು. ಆದ್ರೆ ದುರಾದೃಷ್ಟಕ್ಕೆ ಬಸ್​ ಅಪಘಾತದಲ್ಲಿ ರಂಗ ಮೃತಪಟ್ಟಿದ್ದಾನೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv