ರೊನಾಲ್ಡೋ ಮೈ ಮೇಲೆ ಒಂದೇ ಒಂದು ಟ್ಯಾಟೂ ಇಲ್ಲ! ಯಾಕೆ?

ಫಿಫಾ ವಿಶ್ವಕಪ್‌ ಫಿವರ್ ಈಗಾಗಲೇ ಏರತೊಡಗಿದೆ. ಜಗತ್ತಿನ ಫುಟ್‌ಬಾಲ್‌ ಪ್ರಿಯರೆಲ್ಲರೂ ತಂತಮ್ಮ ನೆಚ್ಚಿನ ತಾರೆಯರ ಆಟ ನೋಡೋದಕ್ಕೆ ಕಣ್ಬಿಟ್ಟುಕೊಂಡು ಕಾದಿದ್ದಾರೆ. ಅದರಲ್ಲೂ ಕ್ರಿಸ್ಟಿಯಾನೋ ರೊನಾಲ್ಡೋ ಆಟ ನೋಡೋದಕ್ಕಂತೂ ಇಡೀ ಫುಟ್‌ಬಾಲ್‌ ಜಗತ್ತೇ ಕಾತರ ತಾಳಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ತಾರೆ ಅಂದ್ರೆ ಕ್ರಿಸ್ಟಿಯಾನೋ ರೊನಾಲ್ಡೊ. ಈ ಪೋರ್ಚುಗಲ್ ಆಟಗಾರನನ್ನ ಕೇವಲ ಆ ದೇಶದವರಷ್ಟೇ ಅಲ್ಲ. ಬಹುತೇಕ ಎಲ್ಲಾ ಫುಟ್‌ಬಾಲ್ ಆಡೋ ದೇಶಗಳ ಅಭಿಮಾನಿಗಳೂ ಆರಾಧಿಸ್ತಾರೆ.

ಕ್ರಿಸ್ಟಿಯಾನೋ ರೊನಾಲ್ಡೋ ಕೇವಲ ಫುಟ್‌ಬಾಲ್ ಆಟಗಾರನಷ್ಟೇ ಅಲ್ಲ. ಆತ ಸ್ಟೈಲ್‌ ಐಕಾನ್ ಕೂಡಾ ಹೌದು. ಆತ ಮಾಡೋ ಹೇರ್‌ಸ್ಟೈಲ್‌ಗಳು ದಿನಬೆಳಗಾಗೋದ್ರ ಒಳಗಾಗಿ ಜಗತ್ತಿನಾದ್ಯಂತ ಸಮೂಹ ಸನ್ನಿಯನ್ನೇ ಸೃಷ್ಟಿ ಮಾಡಿರುತ್ತೆ. ಫುಟ್‌ಬಾಲ್ ಆಟಗಾರರು ತಮ್ಮ ಹೇರ್‌ಸ್ಟೈಲ್‌ಗಳಿಂದಲೂ ಗಮನ ಸೆಳೆಯುತ್ತಿರ್ತಾರೆ. ಜೊತೆಗೆ ಅವರು ಹಾಕಿಸಿಕೊಳ್ಳೋ ಟ್ಯಾಟೂಗಳೂ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟಿಸುತ್ತೆ. ಆದ್ರೆ ರೊನಾಲ್ಡೋ ವಿಷ್ಯದಲ್ಲಿ ಈ ಎರಡನೇಯ ಕ್ರೇಜ್‌ ಅನ್ನ ಕಾಣಲು ಸಾಧ್ಯವಿಲ್ಲ. ಯಾಕಂದ್ರೆ ರೊನಾಲ್ಡೋ ಮೈ ಮೇಲೆ ಒಂದೇ ಒಂದು ಟ್ಯಾಟೂ ಇಲ್ಲ.

ರೊನಾಲ್ಡೋ ಮೈಮೇಲೆ ಯಾಕಿಲ್ಲ ಟ್ಯಾಟೂ?
ಬಹುತೇಕ ಫುಟ್‌ಬಾಲ್ ಆಟಗಾರರೂ ತಮ್ಮ ಮೈ ಮೇಲೆ ಸಣ್ಣದಾಗಿಯಾದ್ರೂ ಒಂದು ಟ್ಯಾಟೂ ಹಾಕಿಸಿಕೊಂಡಿರ್ತಾರೆ. ಕೆಲ ತಾರೆಯರ ಬೆನ್ನು, ಕುತ್ತಿಗೆ, ಕೈ, ಕಾಲು ಹೀಗೆ ದೇಹವೆಲ್ಲಾ ಟ್ಯಾಟೂಗಳಿಂದ ಅಲಂಕೃತವಾಗಿರ್ತವೆ. ಆದ್ರೆ ರೊನಾಲ್ಡೋ ಮೈ ಮೇಲೆ ಟ್ಯಾಟೂವಿನ ಒಂದೇ ಒಂದು ಚುಕ್ಕೆಯೂ ಕಾಣಲ್ಲ. ಹಾಗಾದ್ರೆ ರೊನಾಲ್ಡೋಗೆ ಟ್ಯಾಟೂ ಅಂದ್ರೆ ಇಷ್ಟ ಇಲ್ವಾ? ಇಷ್ಟವೇನೋ ಇದೆ. ಬೇರೆಯವರು, ಹಾಕಿಸಿಕೊಳ್ಳೋದನ್ನಷ್ಟೇ ಇಷ್ಟ ಪಡ್ತಾರೆ ಅಷ್ಟೆ. ಬೇರೆಯವರ ಟ್ಯಾಟೂ ನೋಡಿ ಕಾಂಪ್ಲಿಮೆಂಟ್ ಕೂಡಾ ಕೊಡ್ತಾರೆ. ಅಂಥವರ ಟ್ಯಾಟೂ ಜೊತೆ ಸೆಲ್ಫಿ ತೆಗೆದುಕೊಂಡು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಕೂಡಾ ಮಾಡ್ತಾರೆ. ಆದ್ರೆ ತಾನು ಮಾತ್ರ ಟ್ಯಾಟೂ ಹಾಕಿಸಿಕೊಳ್ಳೋದಿಲ್ಲ.

ರೊನಾಲ್ಡೋ ರಕ್ತದ ಹನಿ ಹನಿಗೂ ಇದೆ ಮಹತ್ವ!
ರೊನಾಲ್ಡೋ ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ಆಟಗಾರ ನಿಜ. ಹಾಗೇನೇ ಶ್ರೇಷ್ಠ ರಕ್ತದಾನಿಯೂ ಹೌದು. ರೊನಾಲ್ಡೋ ರೆಗ್ಯುಲರ್ ಆಗಿ ರಕ್ತದಾನ ಮಾಡ್ತಾರೆ.

2009ರಲ್ಲಿ ಅವರು ಮೊದಲ ಬಾರಿಗೆ ರಕ್ತದಾನ ಮಾಡಿದ್ದರು. ಆ ನಂತರವೂ ನಡು ನಡುವೆ ರಕ್ತದಾನ ಮಾಡಿದ್ದಾರೆ. 2011ರಿಂದೀಚೆಗಂತೂ ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡ್ತಾನೇ ಬರ್ತಿದ್ದಾರೆ. ಪೋರ್ಚುಗಲ್‌ನ ತಮ್ಮ ಮನೆಯಲ್ಲಿ ರಕ್ತದಾನ ಮಾಡೋದಕ್ಕಾಗಿಯೇ ಪ್ರತ್ಯೇಕ ಕ್ಲಿನಿಕ್ ನಿರ್ಮಿಸಿಕೊಂಡಿದ್ದಾರೆ. ರಕ್ತದಾನದ ಔಚಿತ್ಯ ಮತ್ತು ಅದರ ಮಹತ್ವವನ್ನ ಸಾರುವುದು, ಆ ಮೂಲಕ ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ಉತ್ತೇಜಿಸುವುದು ರೊನಾಲ್ಡೋ ಮಹತ್ಕಾರ್ಯಗಳಲ್ಲಿ ಒಂದು. ತಾನು ರಕ್ತದಾನ ಮಾಡೋದಕ್ಕೆ ಅಡ್ಡಿಯಾಗದಿರಲಿ ಅನ್ನೋ ಏಕೈಕ ಕಾರಣದಿಂದಾಗಿಯೇ ಟ್ಯಾಟೂ ಅವಾಯಿಡ್‌ ಮಾಡ್ತಿದ್ದಾರೆ.

ಟ್ಯಾಟೂ ಹಾಕಿಸಿದರೆ 6 ತಿಂಗಳು ರಕ್ತದಾನ ಮಾಡುವಂತಿಲ್ಲ
ಒಮ್ಮೆ ಟ್ಯಾಟೂ ಹಾಕಿಸಿಕೊಂಡರೆ ಆರು ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ ಅಂತಾ ನಿಯಮವಿದೆ. ಅದರಲ್ಲೂ ಕೈಗಳಲ್ಲಿ ರಕ್ತನಾಳಗಳ ಭಾಗದಲ್ಲಿ ಟ್ಯಾಟೂ ಹಾಕಿಸಿದರೆ ಒಂದು ವರ್ಷದ ವರೆಗೂ ಆ ಜಾಗಕ್ಕೆ ರಕ್ತ ತೆಗೆಯಲು ಮತ್ತೆ ಸಿರೀಂಜ್‌ಗಳನ್ನ ಚುಚ್ಚುವುದು ಅಪಾಯಕಾರಿ. ಸಾಲದ್ದಕ್ಕೆ ಟ್ಯಾಟೂ ಹಾಕಿಸಿಕೊಳ್ಳೋದ್ರಿಂದ, ಹೆಪಟೈಟಿಸ್‌ ಬಿಯಂತ ವೈರಾಣುಗಳು, ಇತರೆ ಸೋಂಕು ತರುವ ಸೂಕ್ಷ್ಮಾಣುಗಳು ರಕ್ತ ಸೇರುವ ಅಪಾಯವೂ ಇರುತ್ತೆ. ಅದೇ ರಕ್ತವನ್ನ ಬೇರೊಬ್ಬರಿಗೆ ನೀಡಿದಲ್ಲಿ ಅದರಿಂದ ಉಪಯೋಗಕ್ಕಿಂತಾ ಆಪತ್ತಾಗೋದೇ ಜಾಸ್ತಿ. ಇದೇ ಕಾರಣಕ್ಕಾಗಿ ಟ್ಯಾಟೂವಿನಿಂದ ರೊನಾಲ್ಡೋ ಸದಾ ದೂರ ಉಳಿದಿದ್ದಾರೆ.

ರಕ್ತವಷ್ಟೇ ಅಲ್ಲ, ಮೂಳೆ ಹಿಂದೆಯೂ ಇದೆ ಕತೆ!
ಜಗತ್ತಿನಲ್ಲಿ ರಕ್ತದಾನಿಗಳು ಇದ್ದಾರೆ. ಆದ್ರೆ ಬೋನ್ ಮ್ಯಾರೋ ದಾನಿಗಳು ವಿರಳ. ತಮ್ಮ ಟೀಮ್‌ಮೇಟ್‌ ಕಾರ್ಲೋಸ್ ಮಾರ್ಟಿನ್‌ನ ಮೂರು ವರ್ಷದ ಪುತ್ರನಿಗೆ ಒಮ್ಮೆ ಬೋನ್‌ ಮ್ಯಾರೋ ಅಗತ್ಯ ಬಂದಿತ್ತು. ಬೋನ್‌ಮ್ಯಾರೋ ಸಿಗದೇ ಹೋದಲ್ಲಿ ಆ ಮಗು ಸಾಯುವ ಆತಂಕ ಎದುರಾಗಿತ್ತು. ಆ ಮಗುವನ್ನು ಉಳಿಸಲು ಸೋಷಿಯಲ್ ಮಿಡಿಯಾಗಳಲ್ಲಿ, ಟಿವಿ, ಮಾಧ್ಯಮಗಳಲ್ಲಿ ಸಾಕಷ್ಟು ಮನವಿ ಮಾಡಲಾಯಿತಾದ್ರೂ ಬೋನ್‌ಮ್ಯಾರೋ ದಾನಿಗಳು ಮುಂದೆ ಬಂದಿರಲಿಲ್ಲ. ಕ್ರಿಸ್ಟಿಯಾನೋ ರೊನಾಲ್ಡೋ ಸಹ ಮನವಿ ಮಾಡಿದರಾದ್ರೂ ಹೆಚ್ಚಿನ ರೆಸ್ಪಾನ್ಸ್ ಸಿಗಲಿಲ್ಲ. ಕಡೆಗೆ ಕ್ರಿಸ್ಟಿಯಾನೋ ರೊನಾಲ್ಡೋ ತಾನೇ ಬೋನ್‌ ಮ್ಯಾರೋ ದಾನ ಮಾಡಲು ತಯಾರಾಗ್ತಾರೆ. ಆ ಮೂಲಕ ಬೋನ್‌ ಮ್ಯಾರೋ ದಾನದ ಮಹತ್ವವನ್ನ ಜಗತ್ತಿಗೆ ಸಾರುತ್ತಾರೆ.

ಬೋನ್ ಮ್ಯಾರೋ ದಾನ ಮಾಡುವುದರಿಂದ ದಾನಿಯ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗಲ್ಲ ಅಂತಾ ಜಾಗೃತಿಯನ್ನೂ ಮೂಡಿಸ್ತಾರೆ. ಬೋನ್ ಮ್ಯಾರೋ ದಾನ, ರಕ್ತದಾನಕ್ಕಿಂತ ಭಿನ್ನವೇನಲ್ಲ. ಯಾವುದೇ ನೋವು ಕೂಡಾ ಆಗಲ್ಲ. ಯಾರು ಬೇಕಾದ್ರೂ ಧೈರ್ಯದಿಂದ ಬೋನ್‌ ಮ್ಯಾರೋ ದಾನ ಮಾಡಬಹುದು ಅಂತಾ ಅರಿವು ಮೂಡಿಸ್ತಾರೆ. ಆವತ್ತಿನಿಂದ ರೊನಾಲ್ಡೋ ರೆಗ್ಯುಲರ್ ಆಗಿ ಬೋನ್‌ ಮ್ಯಾರೋ ದಾನ ಮಾಡೋದನ್ನೂ ರೂಢಿಸಿಕೊಂಡಿದ್ದಾರೆ. ಕ್ರಿಸ್ಟಿಯಾನೋರ ಈ ಜಾಗೃತಿ ಕ್ರಮದಿಂದಾಗಿ ಇವತ್ತು ಜಗತ್ತಿನಾದ್ಯಂದ ಬೋನ್‌ಮ್ಯಾರೋ ದಾನಿಗಳೂ ಹೆಚ್ಚಾಗಿದ್ದಾರೆ. ಇನ್ನೊಂದ್ಕಡೆ ಟೀಮ್‌ಮೇಟ್‌ ಕಾರ್ಲೋಸ್ ಮಾರ್ಟಿನ್‌ನ ಮಗನೂ ಬದುಕುಳಿದಿದ್ದಾನೆ.
ನಮ್ಮ ದೇಹ ಅಲಂಕಾರಕ್ಕೆ ಬಳಕೆಯಾಗೋದಕ್ಕಿಂತಾ ಹೆಚ್ಚಾಗಿ ಮತ್ತೊಬ್ಬರಿಗೆ ಉಪಯೋಗವಾಗೋದ್ರಲ್ಲೇ ಹೆಚ್ಚಿನ ಸಾರ್ಥಕತೆಯಿದೆ ಅನ್ನೋದು ರೊನಾಲ್ಡೋ ನಂಬಿಕೆ. ಅಲಂಕಾರಕ್ಕಾಗಿ ಟ್ಯಾಟೂ ಹಾಕಿಸೋದ್ರಿಂದ, ರಕ್ತದಾನ, ಬೋನ್‌ಮ್ಯಾರೋ ದಾನದ ತನ್ನ ಮಹತ್ಕಾರ್ಯಕ್ಕೆ ಬ್ರೇಕ್‌ ಬೀಳಬಾರದು ಅನ್ನೋ ಶ್ರೇಷ್ಠ ಚಿಂತನೆ ಹೊಂದಿದ್ದಾರೆ ರೋನಾಲ್ಡೋ. ಕ್ಷೇತ್ರ ಯಾವುದೇ ಇರಲಿ, ಶ್ರೇಷ್ಠರಾಗಬೇಕಾದ್ರೆ ಚಿಂತನೆ ಶ್ರೇಷ್ಠವಾಗಿರಬೇಕು! ಹೌದಲ್ವೇ?
ವಿಶೇಷ ಬರಹ: ಜೆಫ್ರಿ ಅಯ್ಯಪ್ಪ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv