ಆಳಂದ ಠಾಣಾ ಎಎಸ್ಐ ಮೇಲೆ ರೋಲ್​ಕಾಲ್ ಆರೋಪ

ಕಲಬುರ್ಗಿ‌: ಜಿಲ್ಲೆಯ ಆಳಂದ ಠಾಣೆ ಎಎಸ್ಐ ವಿರುದ್ಧ ಹಣ ವಸೂಲಿ‌ ಆರೋಪ ಕೇಳಿಬಂದಿದೆ. ವಾಹನ ಸವಾರರನ್ನು ತಡೆಯೋದು, ಹಣ ವಸೂಲಿ ಮಾಡೋದೆ ಇವರ ನಿತ್ಯದ ಕಾಯಕವಾಗಿದೆ ಅನ್ನೊ ಆರೋಪ ಜನ ಸಾಮಾನ್ಯರದ್ದು. ಕಲಬುರ್ಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆಯ ಎಎಸ್ಐ ನರಹರಿ ಸೂರ್ಯವಂಶಿ ಆಳಂದ ಉಮ್ಮರ್ಗಾ ರಸ್ತೆಯ ಡಾಬಾ ಬಳಿ ವಾಹನ ಚಾಲಕರನ್ನು ತಡೆದು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿತ್ತು.
ಮಹಾರಾಷ್ಟ್ರದಿಂದ ಆಳಂದ ಕಡೆಗೆ ಬರುವ ದ್ವಿಚಕ್ರ ವಾಹನ, ಟಿಪ್ಪರ್ ಲಾರಿಗಳನ್ನ ತಡೆದು ನಿಲ್ಲಿಸೋದು ಆ ಡಾಕ್ಯುಮೆಂಟ್, ಈ ಡಾಕ್ಯುಮೆಂಟ್ ಅಂತ ಕೇಳಿ ದಬಾಯಿಸೋದು, ನಂತರ ಹಣ ಕೀಳೋದೇ ಇವರ ಖಯಾಲಿ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಒಂದೊಂದು ವಾಹನಕ್ಕೆ ₹ 200 ರಿಂದ 500 ವಸೂಲಿ ಮಾಡ್ತಾರೆ ಎನ್ನುತ್ತಾರೆ ಸ್ಥಳೀಯ ವಾಹನ ಸವಾರರು.
ಎಎಸ್ಐ ಕಾಟಕ್ಕೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಎಎಸ್ಐ ಹಣ ವಸೂಲಿ ಮಾಡುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಎಎಸ್ಐ ವಿರುದ್ಧ ಎಸ್ಪಿ ಎನ್.ಶಶಿಕುಮಾರ್ ಏನು ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕು.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.com