‘ಸಿನಿಮಾದವ್ರನ್ನ ನಂಬಬೇಡಿ ಅಂತಾರೆ, ತಾನು ನಿರ್ಮಾಪಕ ಎನ್ನುತ್ತಾರೆ’

ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರೆ ರಕ್ತ ಕುದಿಯುತ್ತದೆ. ಉತ್ತರ ಕೊಡದೇ ಇರಲು ಆಗಲ್ಲ ಅಂತಾ ರಾಕಿಂಗ್ ಸ್ಟಾರ್ ಯಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಂಡ್ಯದ ಸ್ವಾಭಿಮಾನ ಱಲಿ ಸಮಾವೇಶದಲ್ಲಿ ಮಾತನಾಡಿದ ಯಶ್​, ಒಂದು ಹೆಣ್ಣು ಮಗಳು ಚುನಾವಣೆಗೆ ನಿಂತಿರೋದಕ್ಕೆ ಅದೇನ್ ಮಾತು..? ಅದೇನ್ ದ್ವೇಷ..? ಇದುವರೆಗೂ ಯಾರೂ ನಮ್ಮನ್ನ ಇಷ್ಟು ಕೆಟ್ಟದಾಗಿ ನಡೆಸಿಕೊಂಡಿಲ್ಲ. ಚುನಾವಣೆ ಒಳ್ಳೆ ಕೆಲಸ ಮಾಡಿರುವ ಬಗ್ಗೆ ನಡೆಯುತ್ತಾ? ಅಥವಾ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದ್ರ ಮೇಲೆ ನಡೆಯುತ್ತಾ ಅನ್ನೋದರ ಬಗ್ಗೆ ಗೊಂದಲ ಉಂಟಾಗಿದೆ ಅಂತಾ ಹೇಳಿದರು.

ಜೆಡಿಎಸ್ ಮುಖಂಡರು ಮಾಡುತ್ತಿರುವ ಟೀಕೆಗಳ ಬಗ್ಗೆ ದರ್ಶನ್, ಸುಮಲತಾ ಅಕ್ಕಾ, ಎಲ್ಲರೂ ಸುಮ್ಮನಿರೋಣ ಅಂತಾ ಹೇಳುತ್ತಿದ್ದರು. ಆದ್ರೆ ನಮ್ಮ ರಕ್ತ ಕೇಳಲ್ಲ, ಕುದಿಯುತ್ತಿದೆ. ನೋಡಿ ನಮಗೆ ಎಲ್ಲರ ಮೇಲೂ ಗೌರವ ಇದೆ. ಆದ್ರೆ ಮನೆ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದ್ರೆ ನಾನು ಯಾರಿಗೂ ಕೇರ್​ ಮಾಡಲ್ಲ. ಯಾವ ಸ್ಥಾನದಲ್ಲಿದ್ದಾರೆ ಅನ್ನೋದೂ ನೋಡಲ್ಲ. ಮಾತನಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದರು.

ಸ್ವಾಭಿಮಾನ ಸುಳ್ಳು ಅಂದ್ರೆ ನಾನು ನಂಬಲ್ಲ
ಸ್ವಾಭಿಮಾನ ಅನ್ನೋ ಪದಕ್ಕೆ ಕೆಲವರು ಲೇವಡಿ ಮಾಡುತ್ತಾರೆ. ನಾನು ಮೊಬೈಲ್​​ನಲ್ಲಿ 500 ಅಂತಾ ಆಫರ್ ಕೊಟ್ಟವನಾ? ಪ್ರಚಾರದ ವೇಳೆ ಬಿಸಿಲಿನಲ್ಲಿ ನಿಂತಾಗ ಜನ ಎಳನೀರು ಹಾಗೂ ಸ್ವಂತ ಹಣದಲ್ಲಿ ನೀರು ಬಾಟಲಿ ತಂದು, ಕುಡಿ ಅಣ್ಣಾ ಅಂತ ಕೊಟ್ಟ ಸ್ವಾಭಿಮಾನದ ಜನ ಮಂಡ್ಯದವ್ರು. ಈ ಅಭಿಮಾನ ಸುಳ್ಳು ಅಂತಾ ಹೇಳಿದ್ರೆ ನಾನು ಒಪ್ಪಲ್ಲ ಅಂದ್ರು.

ನಮ್ಮನ್ನ ನೋಡೋಕೆ ಜನ ಬರುತ್ತಾರೆ. ಆದ್ರೆ ವೋಟ್ ಹಾಕಲ್ಲ ಅಂತಾ ಹೇಳುತ್ತಾರೆ.  ಅವ್ರನ್ನ ನೋಡೋಕೆ ಬರಲ್ವಂತೆ, ರಾತ್ರಿ ಹೊತ್ತು ಎಣ್ಣೆ ಹೊಡ್ದು ಬೆಳಗ್ಗೆ ವೋಟ್ ಹಾಕಿಬಿಡ್ತಾರೆ ಎಂದು ವಿರೋಧಿಗಳು ಹೇಳುತ್ತಿದ್ದಾರೆ. ಆದ್ರೆ ನಮ್ಮ ಮಂಡ್ಯದ ಜನ ಹಾಗಲ್ಲ ಸ್ವಾಭಿಮಾನ ಇರುವವರು ಅಂತಾ ಹೇಳಿದರು.

ಸಿನಿಮಾದವ್ರನ್ನ ನಂಬಬೇಡಿ ಅಂತಾರೆ, ತಾನು ನಿರ್ಮಾಪಕ ಎನ್ನುತಾರೆ
ನಾವು ಪ್ರಚಾರಕ್ಕೆ ಬಂದ್ವಿ ಅಂತಾ ಸಿನಿಮಾದವ್ರನ್ನ ನಂಬಬೇಡಿ ಅಂತಾ ಹೇಳುತ್ತಾರೆ. ಕೊನೆಗೆ ನಾನೂ ಕೂಡ ಸಿನಿಮಾ ನಿರ್ಮಾಪಕ ಅಂತಾ ಹೇಳ್ತಾರೆ. ಸಿನಿಮಾದವ್ರನ್ನ ನಂಬಬಾರದು ಅಂದ್ರೆ ಇಬ್ರನ್ನೂ ನಂಬಬಾರದು ಅಂತಾ ಸಿಎಂ ಕುಮಾರಸ್ವಾಮಿಗೆ ಯಶ್​ ಟಾಂಗ್ ನೀಡಿದರು.

ಇದನ್ನೂ ಓದಿ: ಯಾವನೋ ಅವನು ಯಶ್, ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ: ಸಿಎಂ ಕುಮಾರಸ್ವಾಮಿ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv