ಅರ್ಧಕ್ಕೇ ಕೈ ಕೊಡ್ತು ರಾಕೆಟ್:1,64,000 ಅಡಿ ಎತ್ತರದಲ್ಲಿ ನಡೆಯಿತು ಪವಾಡ..!

ಭೂಮಿಯಿಂದ 164,000 ಅಡಿ ಎತ್ತರದಲ್ಲಿಂದು ಒಂದು ದೊಡ್ಡ ಪವಾಡವೇ ನಡೆದಿದೆ. ಬಾಹ್ಯಾಕಾಶ ಪ್ರಯಾಣವನ್ನ ಅರ್ಧಕ್ಕೇ ಮೊಟಕುಗೊಳಿಸಿ ಇಬ್ಬರು ಗಗನಯಾತ್ರಿಗಳು ಪವಾಡಸದೃಶ ರೀತಿಯಲ್ಲಿ ಭೂಮಿಗೆ ವಾಪಸ್​​ ಆಗಿದ್ದಾರೆ.

ಹೌದು. ರಷ್ಯಾ ಹಾಗೂ ಅಮೆರಿಕದ ಗಗನಯಾತ್ರಿಗಳನ್ನು  ಹೊತ್ತೊಯ್ಯುತ್ತಿದ್ದ ರಾಕೆಟ್​​ನಲ್ಲಿ ಮಾರ್ಗಮಧ್ಯೆ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ರಷ್ಯಾ ನಿರ್ಮಿತ ಸೋಯೂಝ್​​​ ನೌಕೆಯನ್ನು ಹೊತ್ತೊಯ್ಯುತ್ತಿದ್ದ ಬೂಸ್ಟರ್​ ರಾಕೆಟ್​​​ನಲ್ಲಿ ದೋಷ ಕಾಣಿಸಿಕೊಂಡು, ಗಗನಯಾತ್ರಿಕರು 50 ಕಿ.ಮೀ( 164,000 ಅಡಿ) ಎತ್ತರದಲ್ಲಿ ತಮ್ಮ ಸ್ಪೇಸ್​​ ಮಿಷನ್​​ ಅರ್ಧಕ್ಕೇ ಮೊಟಕುಗೊಳಿಸಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯ್ತು. ರಾಕೆಟ್​​ನಲ್ಲಿ ಅಮೆರಿಕದ ಗಗನಯಾತ್ರಿ ನಿಕ್ ಹೇಗ್​​ ಹಾಗೂ ರಷ್ಯಾದ ಅಲೆಕ್ಸಿ ಒವ್ಚಿನಿನ್​​ ಇದ್ದರು.

ಕಝಕಿಸ್ತಾನದ ಬೈಕೋನೂರ್​​ನ ಸೋವಿಯತ್​​​ ಎರಾ ಕಾಸ್ಮೋಡ್ರೋಮ್​​ನಿಂದ ರಾಕೆಟ್​​ ಉಡಾವಣೆ ಮಾಡಲಾಗಿತ್ತು. ಗಂಟೆಗೆ 4,970 ಮೈಲಿ ವೇಗದಲ್ಲಿ ಚಲಿಸುತ್ತಿದ್ದ ರಾಕೆಟ್​​ ಮೊದಲು ಸಲೀಸಾಗೇ ಹೋಗಿದ್ದು, ಎತ್ತರಕ್ಕೆ ಹೋದ ನಂತರ ಎರಡನೇ ಹಂತದಲ್ಲಿ ದೋಷ ಕಾಣಿಸಿಕೊಂಡಿದೆ.

ಈ ವೇಳೆ ಗಗನಯಾತ್ರಿಗಳು ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಿದ್ದು, ಇಬ್ಬರೂ ರೆಡಿಯೋ ಸಂಪರ್ಕದಲ್ಲಿದ್ದರು. ನಂತರ ಬ್ಯಾಲಿಸ್ಟಿಕ್​ ರೀ ಎಂಟ್ರಿ ಮೂಲಕ ಕಜಕಿಸ್ತಾನದಲ್ಲಿ ಸೇಫ್​ ಆಗಿ ಲ್ಯಾಂಡ್​ ಆಗಿದ್ದಾರೆ. ಬಳಿಕ ರಕ್ಷಣಾ ಪಡೆ ಸ್ಥಳಕ್ಕೆ ತೆರಳಿ ಗಗನಯಾತ್ರಿಕರನ್ನ ರಕ್ಷಣೆ ಮಾಡಿದೆ.

ದೋಷ ಕಾಣಿಸಿಕೊಂಡ​ ಸಂದರ್ಭದಲ್ಲಿ ರಾಕೆಟ್​​​ನಿಂದ ದಟ್ಟ ಹೊಗೆ ಹೊರಬಂದಿದ್ದು, ಸೋಯುಝ್​ ನೌಕೆಯೊಳಗೆ ಕ್ಯಾಪ್ಯೂಲ್​ನಲ್ಲಿದ್ದ ಇಬ್ಬರು ಗಗನಯಾತ್ರಿಗಳು ಆತಂಕಕ್ಕೊಳಾಗಿದ್ದರು. ನಿಕ್ ಹೇಗ್​ ಹಾಗೂ ಅಲೆಕ್ಸಿ ಒವ್ಚಿನಿನ್ 6 ತಿಂಗಳ ಮಿಷನ್​​ಗಾಗಿ ಬಾಹ್ಯಾಕಾಶಕ್ಕೆ ತೆರಳುತ್ತಿದ್ದರು. ಪವಾಡವೆಂಬಂತೆ ಈ ಇಬ್ಬರೂ ಈಗ ಸಾವನ್ನೇ ಗೆದ್ದು ಬಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv