ಮುಖದ ಸೌಂದರ್ಯ ಹೆಚ್ಚಿಸಲು ಮೊಟ್ಟೆ ಎಷ್ಟು ಸಹಾಯಕ ಅಂತಾ ನಿಮ್ಗೇನಾದ್ರೂ ಗೊತ್ತಾ..?

ದೇಹದ ಆರೋಗ್ಯಕ್ಕೆ ಪ್ರೋಟಿನ್​​ಗಳು ಮತ್ತು ಪೋಷಕಾಂಶಗಳ ಅವಶ್ಯಕತೆ ಅತ್ಯಗತ್ಯ. ದೇಹ ಸದೃಢವಾಗಿ ಬೆಳೆಯಲು ಅಗತ್ಯವಾದ ಪೋಷಕಾಂಶಗಳು  ದೇಹಕ್ಕೆ ಸಿಗಲೇಬೇಕು. ಅದ್ರಲ್ಲೂ ನಮ್ಮ ಚರ್ಮ ಸುಂದರವಾಗಿ ಫಳ, ಫಳನೇ ಹೊಳೆಯುತ್ತಿರಬೇಕು ಅಂದ್ರೆ ಪ್ರೋಟಿನ್​, ಪೋಷಕಾಂಶದ ಅಂಶಗಳು ಇರಲೇಬೇಕು. ಮುಖದ ಕೋಮಲತೆಗಾಗಿ, ಆರೋಗ್ಯಕರ ತ್ವಚೆ ಪಡೆಯಲು ಮೊಟ್ಟೆ ಸಹಾಯಕ. ಮೊಟ್ಟೆಯ ಬಿಳಿ ಭಾಗದಲ್ಲಿ ಅಧಿಕ ಪ್ರೋಟಿನ್​ ಅಂಶ ಇರುವುದರಿಂದ ನಿಮ್ಮ ತ್ವಚೆಯನ್ನು ಹೆಚ್ಚು ಆರೋಗ್ಯಕರವಾಗಿ ಕಾಪಾಡಲು ಸಹಾಯ ಮಾಡುತ್ತದೆ. ಹಾಗಾದರೆ ಮೊಟ್ಟೆಯ ಬಿಳಿ ಭಾಗದಿಂದ ತ್ವಚೆಗೆ ಯಾವ ರೀತಿಯ ಉಪಯೋಗವಿದೆ ಎಂದು ತಿಳಿಯೋಣ.

ಮೊಟ್ಟೆಯ ಬಿಳಿ ಭಾಗವನ್ನು ತ್ವಚೆಯ ಮೇಲೆ ಲೇಪಿಸುವುದರಿಂದ ಹಲವು ಲಾಭಗಳನ್ನು ಪಡೆದುಕೊಳ್ಳಬಹುದು. ಸೂರ್ಯನ ಉರಿ ಬಿಸಿಲು, ಮಾಲಿನ್ಯ, ಅತಿಯಾದ ಧೂಮಪಾನ ಮತ್ತು ಮದ್ಯಪಾನ, ಕೆಮಿಕಲ್​ ಮಿಶ್ರಿತ ಕ್ರಿಮ್​ಗಳ ಬಳಕೆ ಹಾನಿಯಿಂದ ತಡೆಗಟ್ಟಲು ಮೊಟ್ಟೆಯ ಬಿಳಿ ಪದರು ಸಹಾಯವಾಗಲಿದೆ.  ಅಲ್ಲದೇ, ಮೊಟ್ಟೆಯ ಬಿಳಿ ಪದರು ತ್ವಚೆ ಮೇಲೆ ಲೇಪಿಸುವುದರಿಂದ  ಕಳೆಗುಂದಿದ ಚರ್ಮ, ಗುಳ್ಳೆ, ಮೊಡವೆ, ಎಣ್ಣೆ ಅಂಶವುಳ್ಳ ಸ್ಕಿನ್​​ಗೂ ಇದು ಬಹಳ ಉಪಕಾರಿ. ಮೊಟ್ಟೆಯ ಬಿಳಿ ಭಾಗ ಲೇಪನ ಮಾಡುವುದರಿಂದ ಮುಖದಲ್ಲಿರುವ ಎಣ್ಣೆ ಅಂಶ ಹೀರಿಕೊಳ್ಳುತ್ತದೆ. ಅಲ್ಲದೇ ತ್ವಚೆಗೆ ಬೇಕಾದ ವಿಟಮಿನ್​​ ಮತ್ತು ಮಿನರಲ್ಸ್​​ಗಳು ಮೊಟ್ಟೆಯಿಂದ ಸಿಗುತ್ತದೆ. ಸರಳವಾಗಿ ಮನೆಯಲ್ಲೇ ಲೇಪಿಸಿಕೊಳ್ಳಬಹುದಾದ ಈ ಕ್ರಮದಿಂದ ತ್ವಚೆಯೂ ಸದಾ ಹೊಳಪಿನಿಂದ ಕೂಡಿರುವುದರೊಂದಿಗೆ ಆರೋಗ್ಯಕರ ತ್ವಚೆ ಕೂಡ ನಿಮ್ಮದಾಗುತ್ತದೆ.

ಮೊಟ್ಟೆಯ ಬಿಳಿಭಾಗ ತ್ವಚೆಯ ರಂಧ್ರದೊಳಗೆ ಹೋಗಿ ಚರ್ಮವನ್ನು ಬಿಗಿಗೊಳಿಸಲು ಸಹಕರಿಸುತ್ತದೆ. ಮೊಟ್ಟೆಯ ಬಿಳಿ ಪದರು ಜೊತೆಗೆ ನಿಂಬೆಹಣ್ಣು ರಸ ಮಿಶ್ರ ಮಾಡಿ ಮುಖಕ್ಕೆ ಲೇಪಿಸಿಕೊಳ್ಳಬೇಕು. ಕೆಲವು ನಿಮಿಷಗಳ ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಈ ಟಿಪ್ಸ್​ 2 ಬಾರಿ ಮಾಡಿದರೆ ತ್ವಚೆ ಬಿಗಿಯಾಗುವುದರ ಜೊತೆಗೆ ಆರೋಗ್ಯಕರವಾಗಿರುತ್ತದೆ.

ಆಯಿಲ್​ ಸ್ಕಿನ್​ ತ್ವಚೆ ಇದ್ದವರಿಗೆ ಹೆಚ್ಚಾಗಿ ಮೊಡವೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಮೊಟ್ಟೆಯ ಬಿಳಿ ಪದರು ಲೇಪನ ಮಾಡೋದ್ರಿಂದ ತ್ವಚೆ ಬಿಗಿ ಆಗುತ್ತದೆ. ಇದರಿಂದ ಆಯಿಲ್​ ಸ್ಕಿನ್​ ಕಡಿಮೆ ಆಗುತ್ತದೆ. ಮುಖಕ್ಕೆ ಮೊಟ್ಟೆಯ ಬಿಳಿ ಭಾಗ ಲೇಪನ ಮಾಡುವ ಮುಂಚೆ ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ. ಬಳಿಕ ಮೊಟ್ಟೆಯ ಬಿಳಿ ಭಾಗ ಹಚ್ಚಿಕೊಂಡು ಅದನ್ನು ಒಣಗಲು ಬಿಡಿ. ಇದು ಒಣಗಿದ ನಂತರ ಮಾಸ್ಕ್​ ತೆಗೆಯಲು ತಣ್ಣನೆ ನೀರಿನಿಂದ ಮುಖ ತೊಳೆದುಕೊಳ್ಳಿ. ಬಳಿಕ ಸಾಫ್ಟ್​ ಟವೆಲ್​ನಿಂದ ಮುಖ ಒರೆಸಿಕೊಳ್ಳಿ. ವಾರದಲ್ಲಿ ಕನಿಷ್ಟ ಎರಡು ಮೂರು ಬಾರಿ ಹೀಗೆ ಮಾಡಿ. ಇದರಿಂದ ನಿಮ್ಮ ತ್ವಚೆಯ ಆರೋಗ್ಯ ವೃದ್ಧಿಯಾಗುತ್ತದೆ.