ಅಕ್ಕಿ, ಹಾಲು, ಸಾಲ ಮನ್ನಾ ಮಾಡಿದ್ರೆ ಕೊನೆ ಬೆಂಚಿನಲ್ಲಿ ಕೂರಿಸುತ್ತಾರೆ: ಸ್ಪೀಕರ್ ವ್ಯಂಗ್ಯ

ಬೆಂಗಳೂರು: ಸಾಲಮನ್ನಾ ಬಗ್ಗೆ ಸಿಎಂ ಕುಮಾರಸ್ವಾಮಿ ಸದನಕ್ಕೆ ಮಾಹಿತಿ ಕೊಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್, ಅಕ್ಕಿ, ಹಾಲು ಯಾರೂ ಕೊಡಬಾರದು, ರೈತರ ಸಾಲ ಮನ್ನ ಯಾರೂ ಮಾಡಬಾರದು. ಅದನ್ನೆಲ್ಲಾ ಮಾಡಿದ್ರೆ ಜನ ಕೊನೆಯ ಬೆಂಚಿನಲ್ಲಿ ಕೂಡಿಸುತ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರದ ಸಾಧನೆಯನ್ನ ಹೊಗಳಿ, ಜನರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಮುಂದುವರೆಸಿದ ಸಿಎಂ ಹೆಚ್​ಡಿ ಕುಮಾರಸ್ವಾಮಿ, ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ರೈತರ ಸಾಲ ಬಾಕಿ ₹ 10125 ಕೋಟಿ ಹಾಗೂ ಸಹಕಾರಿ ಬ್ಯಾಂಕ್​ಗಳಲ್ಲಿ ₹ 10723 ಕೋಟಿ ಸಾಲ ಬಾಕಿ ಇದೆ. ಈಗ 22 ಲಕ್ಷ ಜನರ ₹ 25,000 ಸಾಲ ಮನ್ನಾ ಮಾಡಲು ಮುಂದಾದ್ರೂ ಸರ್ಕಾರಕ್ಕೆ ₹ 5000 ಕೋಟಿ ಹೆಚ್ಚಿನ ಹೊರೆಯಾಗುತ್ತದೆ. ಸಾಲಮನ್ನಾದಿಂದ ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಅನುಕೂಲ ಹಾಗೂ ಕೊಡಗು ಜಿಲ್ಲೆಗೆ ಕಡಿಮೆ ಅನುಕೂಲವಾಗುತ್ತದೆ. ಸಾಲಮನ್ನಾದ ಹಣವನ್ನು ನಾಲ್ಕು ಕಂತುಗಳಲ್ಲಿ ಸರ್ಕಾರ ಮರುಪಾವತಿ ಮಾಡಲು ಬ್ಯಾಂಕ್ ಗಳ ಆಡಳಿತ ಮಂಡಳಿಗಳನ್ನು ಒಪ್ಪಿಸಿದ್ದೇನೆ‌. ಅವರು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡುತ್ತಾರೆ ಎಂದರು.

ಅಲ್ಲದೇ, ಪ್ರತಿಪಕ್ಷ ನಾಯಕರು ನಮ್ಮ ಪ್ರಣಾಳಿಕೆ ಟೀಕೆ ಮಾಡ್ತಾರೆ. ಆದರೆ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು ಕೃಷಿ ಬೆಳೆಗಳ ಸಾಮಾನ್ಯ ಕನಿಷ್ಠ ದರ ಹೆಚ್ಚಳ ಹಾಗೂ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ ಮಾಡ್ತೀವಿ ಅಂತಾ ಭರವಸೆ ನೀಡಿತ್ತು. ಆದರೆ ಈಗ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಎಂ.ಎಸ್.ಪಿ. ಘೋಷಣೆ ಮಾಡಿದ್ದಾರೆ. ಅದೂ ಕೂಡ ಎನ್.ಡಿ.ಎ.ಯ ಸಾಧನೆಯಲ್ಲ ಎಂದರು.
ಕುಮಾರಸ್ವಾಮಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ, ಸಾಲ ಮರುಪಾವತಿ ಮಾಡದ ಹೊರತೂ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಋಣಮುಕ್ತ ಪ್ರಮಾಣ ಪತ್ರ ನೀಡುವುದಿಲ್ಲ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ₹ 6500 ಕೋಟಿ ಸಾಲವನ್ನು ನಾಲ್ಕು ಕಂತುಗಳಲ್ಲಿ ಪಾವತಿಸುತ್ತೇವೆ. ಅವರು ಮೊದಲೇ ಋಣಮುಕ್ತ ಪ್ರಮಾಣ ಪತ್ರ ವಿತರಿಸುತ್ತಾರೆ ಎಂದರೆ ಅತ್ಯಂತ ಆಶ್ಚರ್ಯವಾಗುತ್ತದೆ ಎಂದರು.

ಯಡಿಯೂರಪ್ಪ ಮಾತಿನ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್, ಯಾವುದೇ ಬ್ಯಾಂಕ್, ಕೊಟ್ಟ ಮಾತಿಗೆ ತಕ್ಕಂತೆ ನಡೆಯದೇ ಇದ್ದಲ್ಲಿ ಆಗ ಮುಖ್ಯಮಂತ್ರಿಗಳನ್ನು ಹೊಣೆಗಾರರಾಗಿ ಮಾಡಬಹುದು. ಈಗ ರೈತರ ಸಾಲ ಮನ್ನಾಗೆ ಒಂದು ಪ್ರಯತ್ನ ಮಾಡಿದ್ದಾರೆ. ಹೇಗಾದರೂ ಮಾಡಲಿ ಆದರೆ ಸಾಲಮನ್ನಾ ಆಗಲಿ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv