ಆಳಂದ ತಾಲೂಕಿನಲ್ಲಿ ರಾಜಕೀಯ ವೈಷಮ್ಯ ಮತ್ತೆ ಶುರುವಾಗಿದೆ: ಬಿ.ಆರ್.ಪಾಟೀಲ್

ಕಲಬುರ್ಗಿ: ಚುನಾವಣೆ ಬಳಿಕ ಆಳಂದ ತಾಲೂಕಿನಲ್ಲಿ ರಾಜಕೀಯ ವೈಷಮ್ಯ ಮತ್ತೆ ಶುರುವಾಗಿದೆ ಅಂತಾ ತಡಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ‌ ಮಹೇಶ್ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹೇಶ್ ತಂದೆ ಕಳೆದ ಮೂವತ್ತು ವರ್ಷಗಳಿಂದ ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ವಿಧಾನಸಭಾ ಚುನಾವಣೆಯ ಮತದಾನದಲ್ಲಿ ತಡಕಲ್ ಗ್ರಾಮದಲ್ಲಿ ಶೇಕಡ 90ರಷ್ಟು ದಲಿತರು ನಮಗೆ ಮತ ನೀಡಿದ್ದಾರೆ. ತಡಕಲ್ ಗ್ರಾಮದಲ್ಲಿ 1600 ಮತಗಳು‌ ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ ಅಂತಾ ತಿಳಿಸಿದರು. ತಡಕಲ್ ಗ್ರಾ.ಪಂ. ವ್ಯಾಪ್ತಿಯ ತೊರೆವಾಡಿಯಲ್ಲೂ ಇಬ್ಬರ ಮೇಲೆ ಹಲ್ಲೆಯಾಗಿತ್ತು. ಭಯದ ವಾತಾವರಣ ಹಿನ್ನೆಲೆಯಲ್ಲಿ ಅವರು ಪ್ರಕರಣ ದಾಖಲಿಸಲಿಲ್ಲ ಎಂದ ಅವರು, ಆಳಂದ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ ಎಂದು ಆರೋಪಿಸಿದರು.

‘ಗುತ್ತೇದಾರ್ ಬೆಂಬಲಿಗರ ದಬ್ಬಾಳಿಕೆ, ಗೂಂಡಾಗಿರಿ ಹೆಚ್ಚಾಗಿದೆ’
ಆಳಂದದಿಂದ ಬೈಕ್ ಮೇಲೆ ತಡಕಲ್​​​​​ಗೆ ಬರುತ್ತಿದ್ದಾಗ ಅಡ್ಡಗಟ್ಟಿ ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಬಾಡಿಗೆ ಜೀಪ್ ಮಾಡಿಕೊಂಡು ಕರೆದುಕೊಂಡು ಹೋಗಲು‌ ಮುಂದಾದಾಗ ಭಯಗೊಂಡು‌ ಯಾರೂ ಸಹಾಯ‌ ಮಾಡಲಿಲ್ಲ ಎಂದರು. ಪಡಸಾವಳಿಯಲ್ಲಿ ವೈಜನಾಥ ಪಾಟೀಲ್ ಎಂಬುವವವರ ಮೇಲೆಯೂ ಸಹ ಹಲ್ಲೆ ನಡೆಸಿದ್ದಾರೆ. ಭೂಸನೂರು, ಮಾಲಾಡೆ ಗ್ರಾಮಗಳಲ್ಲಿ ಗಲಾಟೆ ನಡೆದಿದೆ. ಚುನಾವಣೆ ಮುಗಿದ ಮೇಲೆ ಗುತ್ತೇದಾರ್ ಬೆಂಬಲಿಗರ ದಬ್ಬಾಳಿಕೆ, ಗೂಂಡಾಗಿರಿ ಹೆಚ್ಚಾಗಿದೆ ಎಂದು ಆರೋಪಿಸಿದರು. ಮೊನ್ನೆ ಘಟನೆ ನಡೆದರೂ ಪೊಲೀಸರು ನಿನ್ನೆ ಮಧ್ಯಾಹ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಯಾವುದೇ ಸರ್ಕಾರ ಬಂದರೂ ಪೊಲೀಸರ ಮೇಲೆ ಸುಭಾಷ್ ಗುತ್ತೇದಾರ್, ಮಾಲೀಕಯ್ಯ ಗುತ್ತೇದಾರ್ ಪ್ರಭಾವ ಬೀರುತ್ತಿದ್ದಾರೆ. ಆಳಂದ ತಾಲೂಕಿನಲ್ಲಿ ಮತ್ತೆ ಸೇಡಿನ ರಾಜಕಾರಣ ಪ್ರಾರಂಭವಾಗಿದೆ ಎಂದರು. ನನ್ನನ್ನು ಬೆಂಬಲಿಸಿದವರ ಮೇಲೆ ಬೆದರಿಕೆ, ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ. ಈ ರೀತಿಯ ಗೂಂಡಾಗಿರಿ, ದಬ್ಬಾಳಿಕೆಯನ್ನು ನಾವೂ ಸಹಿಸಲ್ಲ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv