ವರ್ಷದಲ್ಲಿ 3ನೇ ಬಾರಿ ರೆಸ್ಟೊರೆಂಟ್​​ಗೆ ನುಗ್ಗಿತು ಕಾರ್​​…!

ಕೊಲರಾಡೋದ ಡೆನ್ವರ್​​ನಲ್ಲಿರೋ ಈ ರೆಸ್ಟೊರೆಂಟ್ ತುಂಬಾ ಅನ್​ಲಕ್ಕಿ ಅಂತ ಕರೆಯಬಹುದೇನೋ. ಇದು ನಿಜಕ್ಕೂ ರೆಸ್ಟೊರೆಂಟೇ, ಪಾರ್ಕಿಂಗ್​​​ ಅಲ್ಲ ಅಂತ​​ ​​ತನ್ನ ಗ್ರಾಹಕರಿಗೆ ಭರವಸೆ ನೀಡೋ ಪರಿಸ್ಥಿತಿಗೆ ಈ ರೆಸ್ಟೊರೆಂಟ್​ ಬಂದಿದೆ. ಯಾಕಂದ್ರೆ ಒಂದೇ ವರ್ಷದಲ್ಲಿ ಈ ರೆಸ್ಟೊರೆಂಟ್​ಗೆ ಮೂರು ಬಾರಿ ಕಾರ್​ಗಳು​​​ ಒಳನುಗ್ಗಿ ಧ್ವಂಸ ಮಾಡಿವೆ.

ಕಳೆದ ವಾರ ನಸುಕಿನ ಜಾವ 2 ಗಂಟೆ ವೇಳೆಗೆ ದಿ ಹಾರ್ನೆಟ್​​ ರೆಸ್ಟೊರೆಂಟ್​​ನೊಳಗೆ ಕಾರ್​ ನುಗ್ಗಿದೆ. ಬಿಎಂಡಬ್ಲ್ಯೂ ಕಾರ್​​ ಸೀದಾ ಒಳಗೆ ನುಗ್ಗಿ, ಕಿಟಕಿ ಗಾಜು ಪುಡಿಪುಡಿಯಾಗಿರೋ ಫೋಟೋವನ್ನ ರೆಸ್ಟೊರೆಂಟ್​​ನ ಇನ್ಸ್​​ಟಾಗ್ರಾಂ ಅಕೌಂಟ್​​​ನಲ್ಲಿ ಹಂಚಿಕೊಳ್ಳಲಾಗಿದೆ. ಅದೃಷ್ಟವಶಾತ್​​ ಈ ಅವಘಡದಿಂದ ಯಾರಿಗೂ ಗಾಯಗಳಾಗಿಲ್ಲ. ರೆಸ್ಟೊರೆಂಟ್​​​​ನೊಳಗೆ ಕಾರ್​ ನುಗ್ಗಿಸಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್​ ಚಾಲನೆ ಮಾಡುವ ವೇಳೆ ಡ್ರೈವರ್​​ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ.

ಈ ವರ್ಷ ನಮಗೆ ನಿಜಕ್ಕೂ ಒಂದು ಶಾಪ. ಕಾರ್​ ರೆಸ್ಟೊರೆಂಟ್​​ನೊಳಗೆ ನುಗ್ಗಿದಾಗ ಕೆಲವು ಸಿಬ್ಬಂದಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎಂದು ರೆಸ್ಟೊರೆಂಟ್​ ಮಾಲೀಕ ಸೀನ್​​​ ವರ್ಕ್​​​ಮ್ಯಾನ್​ ಹೇಳಿದ್ದಾರೆ. ಎರಡು ವಾರಗಳ ಹಿಂದಷ್ಟೇ ಕಾರ್​​ವೊಂದು, ಮತ್ತೊಂದು ಕಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ರೆಸ್ಟೊರೆಂಟ್​ನ ಕಿಟಕಿಗೆ ಗುದ್ದಿ ಒಳನುಗ್ಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ಕೂಡ ಡ್ರೈವರ್​​ವೊಬ್ಬ ತನ್ನ ಕಾರನ್ನ ರೆಸ್ಟೊರೆಂಟ್​​ ಕಿಟಕಿಯೊಳಗೆ ನುಗ್ಗಿಸಿದ್ದ.

ಇನ್ನು ಈ ಘಟನೆ ಬಳಿಕ ಮತ್ತೆ ರೆಸ್ಟೊರೆಂಟ್​ ಓಪನ್​ ಆಗಿದೆ. ನಮ್ಮ ರೆಸ್ಟೊರೆಂಟ್​ ಸೇಫ್​ ಆಗಿದೆ, ದಯವಿಟ್ಟು ಬಂದು ನಮ್ಮ ಸಿಬ್ಬಂದಿಗೆ ಬೆಂಬಲ ನೀಡಿ ಅಂತ ರೆಸ್ಟೊರೆಂಟ್​​ನ ಗೋಡೆ ಮೇಲೆ ಬರೆಯಲಾಗಿದೆ. ಇದರ ಫೋಟೋವನ್ನು ​ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಮತ್ತೆ ಯಾರಾದ್ರೂ ಕಾರ್​ ನುಗ್ಗಿಸಿಬಿಟ್ಟಾರು ಅಂತ “ಪಾರ್ಕಿಂಗ್​​ ಹಿಂದೆ ಇದೆ” ಅಂತಲೂ ಹೋಟೆಲ್​​ ಮೇಲೆ ಬರೆದಿದ್ದಾರೆ.