ಸಚಿವ ಮಹೇಶ್​ ರಾಜೀನಾಮೆ ಸರ್ಕಾರ ಬೀಳುವುದಕ್ಕೆ ಮೊದಲ ಹೆಜ್ಜೆ: ಜಗದೀಶ ಶೆಟ್ಟರ್​

ಹುಬ್ಬಳ್ಳಿ: ಸಚಿವ ಎನ್​.ಮಹೇಶ್​ ರಾಜೀನಾಮೆ ನೀಡಿರೋದು ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳುವುದಕ್ಕೆ ಮೊದಲ ಹೆಜ್ಜೆ ಆಗಿದೆ. ಯಾವ ಕ್ಷಣದಲ್ಲಿ ಏನು ಆಗುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಸಂಪುಟ ವಿಸ್ತರಣೆ ಆದ ಕೂಡಲೇ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನಾದೇಶ ವಿರುದ್ಧವಾದ ಸರ್ಕಾರವಿದೆ. ಸಮಿಶ್ರ ಸರ್ಕಾರದ ಸಚಿವರು ಮತ್ತು ಶಾಸಕರು ಮತ್ತು ಮುಖಂಡರ ನಡುವೆ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಒಂದು ಕೆಟ್ಟ ಸರ್ಕಾರವಿದೆ ಎನ್ನುವುದಕ್ಕೆ ಪುಟ್ಟರಂಗ ಶೆಟ್ಟಿ ಹಾಗೂ ಎನ್.ಮಹೇಶ ನಡುವಿನ ಜಗಳ ಎತ್ತಿ ತೋರಿಸುತ್ತದೆ. ಈಗ ಮತ್ತೆ ಪರಸ್ಪರ ನಂಬಿಕೆ ಇಲ್ಲವೆನ್ನುವುದಕ್ಕೆ ಎನ್.ಮಹೇಶ ರಾಜೀನಾಮೆ ಉದಾಹರಣೆ ಎಂದು ಅವರು ಹೇಳಿದರು.
ಸರ್ಕಾರ ರಚನೆ ಆದಾಗಿನಿಂದಲೂ ಎನ್.ಮಹೇಶ ಅನ್​ಕಂಫರ್ಟಬಲ್ ಆಗಿದ್ದರು. ಸರ್ಕಾರ ಅಥವಾ ಮುಖ್ಯಮಂತ್ರಿ ಅವರನ್ನು ತೆಗೆದು ಹಾಕಿಲ್ಲ. ಅವರೇ ರಾಜೀನಾಮೆ ನೀಡಿ ಮನೆಗೆ ಹೋಗುತ್ತಾರೆ ಎಂದರೆ ಅದು ರಾಜಕೀಯವಾಗಿ ದೊಡ್ಡ ಸಿಗ್ನಲ್ ಹೋಗುತ್ತದೆ. ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ. ರಾಷ್ಟ್ರ ರಾಜಕಾರಣಕ್ಕೆ ಇದೊಂದು ದಿಕ್ಸೂಚಿ ಎಂದು ಅವರು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv