ಅಣ್ಣಾವ್ರು, ಅಂಬಿಯನ್ನ ಒಂದೇ ದಿನ ನೆನೆಯುವ ಸೌಭಾಗ್ಯ..!

ಸ್ಯಾಂಡಲ್​​ವುಡ್​ ಇರುವವರೆಗೂ ಈ ಎರಡು ಹೆಸರು ಅಜರಾಮರ. ವರನಟ ಡಾ.ರಾಜ್​ಕುಮಾರ್​, ರೆಬೆಲ್​ ಸ್ಟಾರ್​ ಡಾ. ಅಂಬರೀಶ್​. ಕನ್ನಡ ಚಿತ್ರರಂಗದ 2 ಧ್ರುವತಾರೆಗಳು ಅಂಬರೀಶ್​ ಹಾಗೂ ರಾಜ್​ಕುಮಾರ್​. ಈ ಇಬ್ಬರು ಅಭಿಮಾನಿಗಳನ್ನ ತೊರೆದ ಮೇಲೆ ಅವ್ರ ನೆನಪುಗಳನ್ನ ಒಂದೇ ಕಡೆ ಅಂದರೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕವಾಗಿಸಿದೆ. ಈ ಇಬ್ಬರು ಸ್ಟಾರ್​​ಗಳನ್ನ ನೋಡೋದಕ್ಕೆ ಪ್ರತಿ ನಿತ್ಯ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಕೆ ಆಗಮಿಸ್ತಾರೆ. ಆದ್ರೆ ಇವತ್ತು ಕಂಠೀರವ ಸ್ಟುಡಿಯೋದಲ್ಲಿ ಹಬ್ಬದ ವಾತಾವರಣ. ಅದಕ್ಕೆ ಮೊದಲ ಕಾರಣ ಪದ್ಮಭೂಷಣ, ನಟಸಾರ್ವಭೌಮ ರಾಜ್​ಕುಮಾರ್​ ಅವ್ರ 90ನೇ ಜನ್ಮ ಜಯಂತಿಯ ಆಚರಣೆ ಮತ್ತೊಂದು ಕಲಿಯುಗ ಕರ್ಣ ಅಂಬರೀಶ್​ ಅವ್ರ 5ನೇ ತಿಂಗಳ ಪುಣ್ಯ ಸ್ಮರಣೆ..!
ದಿಗ್ಗಜ ಕುಟುಂಬದ ಜೊತೆಗೆ ಅಭಿಮಾನಿ ಸಾಗರ..!
ರಾಜ್​ ಜನ್ಮಜಯಂತಿ ಹಾಗೂ ಅಂಬರೀಶ್​ ಪುಣ್ಯಸ್ಮರಣೆ ಕಾರ್ಯಕ್ರಮ ಒಂದೇ ದಿನ ಬಂದಿರೋದು ಕಾಕತಾಳೀಯ ಅಷ್ಟೆ ಅಲ್ಲದೆ. ಇಬ್ಬರು ಸಿನಿಮಾದಲ್ಲಷ್ಟೆ ನಿಜಜೀವನದಲ್ಲೂ ಒಡಹುಟ್ಟಿದವರ ರೀತಿಯಲ್ಲೇ ಇದ್ದವರು. ಇಬ್ಬರ ಸ್ಮರಣೆ ಕಾರ್ಯಕ್ರಮ ಒಂದೇ ದಿನ ಬಂದಿರೋದು ಅಭಿಮಾನಿಗಳಿಗೂ ಸಂಭ್ರಮದ ಕ್ಷಣ. ಇದೇ ಸಂದರ್ಭದಲ್ಲಿ ರಾಜ್​ಕುಟುಂಬ ಅಂಬಿ ಸಮಾಧಿಗೂ, ಅಂಬಿ ಪತ್ನಿ ಹಾಗೂ ಪುತ್ರ ಅಭಿಶೇಕ್​ ರಾಜ್​ ಸಮಾಧಿಗೂ ಭೇಟಿ ನೀಡಿ, ಮೇರು ನಟರ ಆಶೀರ್ವಾಧ ಪಡೆದಿದ್ದು ವಿಶೇಷವಾಗಿತ್ತು. ಜೊತೆಗೆ ಅಭಿಮಾನಿಗಳೂ ಕೂಡ ಎರಡೂ ಸಮಾಧಿಗಳಿಗೆ ನಮಿಸಿ ಈ ದಿನವನ್ನ ತಮ್ಮ ಬದುಕಿನ ಅವಿಸ್ಮರಣೀಯ ದಿನವನ್ನಾಗಿಸಿಕೊಂಡರು