ನೀವು ದೇವರನ್ನು ನಂಬ್ತೀರಾ? ನಂಬಲ್ವೋ? ಆದ್ರೆ ನಾಸ್ತಿಕರಿಗಿಂತ ಆಸ್ತಿಕರೇ ಹೆಚ್ಚು ಸುಖಿಗಳಂತೆ..!

ಜನರು ದೇವರನ್ನು ನಂಬುತ್ತಾರೋ, ಬಿಡುತ್ತಾರೋ. ಆದ್ರೆ ಎಲ್ಲರಲ್ಲೂ ದೇವರ ಬಗ್ಗೆ ಕುತೂಹಲ ಇದ್ದೇ ಇದೆ. ದೇವರನ್ನು ನಂಬುವ ಆಸ್ತಿಕರು ಸಾಕಷ್ಟಿದ್ದಾರೆ. ಇನ್ನು ನಾಸ್ತಿಕರ ಮನಸ್ಸಲ್ಲಿ ದೇವರು ಇಲ್ಲ ಎನ್ನುವ ಭಾವನೆ ಇದೆ. ಆದ್ರೆ ನೀವು ಆಸ್ತಿಕರಾಗಿದ್ದರೆ ಸಂತೋಷಪಡಿ.. ಯಾಕಂದ್ರೆ ನಾಸ್ತಿಕರಿಗಿಂತ ಆಸ್ತಿಕರು (ದೇವರನ್ನು ನಂಬುವವರು) ಧಾರ್ಮಿಕ ಪೂಜೆ, ದೇವರ ಪ್ರಾರ್ಥನೆ , ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವವರು ಹೆಚ್ಚು ಸಂತೋಷ ಹೊಂದಿದ್ದಾರೆಂದು ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಅಧ್ಯಯನ ಏನು ಹೇಳುತ್ತದೆ?
ಪ್ಯೂ ರಿಸರ್ಚ್ (Pew Research ) ಸೆೆಂಟರ್‌ ನಡೆಸಿದ ಅಧ್ಯಯನ ಪ್ರಕಾರ, ವ್ಯಕ್ತಿಗಳ ಮೇಲೆ ಧಾರ್ಮಿಕ ಕಾರ್ಯಕ್ರಮಗಳು ಕೂಡಾ ಪ್ರಭಾವ ಬೀರಬಲ್ಲವು. ಈ ಬಗ್ಗೆ ವಿವಿಧ ದೇಶಗಳ ಸಾವಿರಾರು ವ್ಯಕ್ತಿಗಳ ಜೀವನಕ್ರಮ ಹಾಗೂ ಇವರು ಎಷ್ಟು ಸಂತೋಷದಿಂದ ಇದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ.  ಇದಕ್ಕಾಗಿ 24 ದೇಶಗಳ ಜನರ ಜೀವನ ಶೈಲಿಯನ್ನ ಸಂಗ್ರಹಿಸಲಾಗಿದೆ. ಈ ವೇಳೆ ನಾಸ್ತಿಕರಿಗಿಂತ ಆಸ್ತಿಕರು(ದೇವರನ್ನು ನಂಬುವವರು) ಹೆಚ್ಚು ಸಂತೋಷದಿಂದ ಇರುತ್ತಾರೆ.  ಧಾರ್ಮಿಕ ಸಮಾರಂಭಗಳಲ್ಲಿ, ದೇವರ ಪ್ರಾರ್ಥನೆ, ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವ ಜನರು ಹೆಚ್ಚು ಸಂತೋಷದಿಂದ ಇರುತ್ತಾರೆ. ಹಾಗೂ ಹೆಚ್ಚು ಧನಾತ್ಮಕರಾಗಿರುತ್ತಾರೆ ಎಂದು ತಿಳಿದು ಬಂದಿದೆ. ಆದ್ರೆ ವ್ಯಕ್ತಿಗಳ ಧಾರ್ಮಿಕ ಮನೋಭಾವನೆಗೂ ಹಾಗೂ ಸಂತೋಷದ ಮಧ್ಯೆ ಇರುವ ವೈಜ್ಞಾನಿಕ ಸಂಬಂಧ ತಿಳಿದು ಬಂದಿಲ್ಲ. ಸಂಶೋಧನೆ ಪ್ರಕಾರ, ಇದಕ್ಕಾಗಿ ಮೂರು ಪ್ರಕಾರದ ವಿಂಗಡಣೆ ಮಾಡಲಾಗಿತ್ತು.

ಧಾರ್ಮಿಕವಾಗಿ ಸಕ್ರಿಯವಾಗಿರುವ ಗುಂಪು, ಸಕ್ರಿಯರಲ್ಲದ ಗುಂಪು, ಹಾಗೂ ಯಾವುದೇ ಧರ್ಮದ ಜತೆ ಸಂಪರ್ಕ ಹೊಂದದೇ ಇರುವವರು ಗುಂಪು ಎಂದು ವಿಂಗಡಣೆ ಮಾಡಲಾಗಿತ್ತು. ಈ ವೇಳೆ ಅಮೆರಿಕಾದ ಶೇ 36 ರಷ್ಟು ಜನರು ಧಾರ್ಮಿಕವಾಗಿ ಸಕ್ರಿಯರಾಗಿದ್ದು, ಹೆಚ್ಚು ಸಂತೋಷದಿಂದ ಇದ್ದಿದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಆಸ್ಟ್ರೇಲಿಯಾದ ಶೇ. 32ರಷ್ಟು ಜನರು ನಾಸ್ತಿಕರಿಗಿಂತ ಹೆಚ್ಚು ಸಂತೋಷದಿಂದ, ಉತ್ತಮ ಜೀವನ ಶೈಲಿ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಆಸ್ತಿಕರಾಗಿರುವ ಜನರು, ಪೂಜೆ ಪುನಸ್ಕಾರಗಳಲ್ಲಿ ತೊಡುಗುವ ವ್ಯಕ್ತಿಗಳು ಹೆಚ್ಚು ಸಂತೋಷದಿಂದ , ಧನಾತ್ಮಕ ಮನೋಭಾವ ಹೊಂದಿರುತ್ತಾರೆ ಈ ಅಧ್ಯಯನ ಧೃಡಪಡಿಸಿದೆ. ಧಾರ್ಮಿಕ ಮನೋಭಾವ, ಆಧ್ಯಾತ್ಮ ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಗುರಿಯತ್ತ ಸಾಗಲು, ಸಂತೋಷವನ್ನು ಪ್ರೇರೆಪಿಸುತ್ತದೆ. ಒಂಟಿತನ ಹಾಗೂ ಖಿನ್ನತೆ, ಆತಂಕವನ್ನು ಕಡಿಮೆಗೊಳಿಸಲು ಸಹಾಯಕಾರಿಯಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ವರದಿ: ಸುಧಾ ಉಜ್ಜಾ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv