ನಾಯಿಗಳಿಗೆ ರಿಫ್ಲೆಕ್ಟಿಂಗ್​ ಬೆಲ್ಟ್ ಕಟ್ಟಿ, ಅಪಘಾತಗಳ ತಪ್ಪಿಸಲು ಯತ್ನ

ಮಂಗಳೂರು: ನಗರದಲ್ಲಿ‌ ರಾತ್ರಿ ವೇಳೆ ವಾಹನಗಳ ಅಡಿಗೆ ಬಿದ್ದು ವರ್ಷಕ್ಕೆ ನೂರಾರು ಬೀದಿನಾಯಿಗಳು ಸಾವನ್ನಪ್ಪುತ್ತವೆ. ಅಲ್ಲದೇ ರಾತ್ರಿವೇಳೆ ರಸ್ತೆಯಲ್ಲಿ ಬೀದಿನಾಯಿಗಳು ಅಡ್ಡಾದಿಡ್ಡಿ ಓಡಾಡುವುದರಿಂದ ವಾಹನ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಬೀದಿನಾಯಿಗಳೇ ಬೈಕ್ ಸವಾರರ ಸಾವಿಗೂ ಕಾರಣವಾಗುತ್ತವೆ. ಹೀಗಾಗಿ ಇಂತಹ ಅಪಘಾತಗಳನ್ನ ತಪ್ಪಿಸಿ ಶ್ವಾನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶಿಷ್ಟ ಪ್ರಯತ್ನಕ್ಕೆ ಹಾಕಿ ಯಶಸ್ಸು ಕಂಡಿರುವವರು ಮಂಗಳೂರಿನ ಪ್ರಾಣಿ ಸಂರಕ್ಷಕ ಅನಿಮಲ್ ಕೇರ್ ಸದಸ್ಯ ತೌಸಿಫ್.

ಬೀದಿ ನಾಯಿಗಳು ರಾತ್ರಿ ವೇಳೆ ರಸ್ತೆ ಓಡಾಡುತ್ತಿರುವಾಗ ವಾಹನ ಸವಾರರ ಕಣ್ಣಿಗೆ ಏಕಾಏಕಿ ಗೋಚರಿಸಿ ಸಂಭವಿಸುವ ಅಪಘಾತಗಳನ್ನ ತಪ್ಪಿಸುವ ಸಲುವಾಗಿ ಬೀದಿನಾಯಿಗಳ ಕೊರಳಿಗೆ ರಿಫ್ಲೆಕ್ಟಿಂಗ್​  ಬೆಲ್ಟ್​ಗಳನ್ನು ಹಾಕಿದ್ದಾರೆ. ಇದರಿಂದ ಮುಂದಿನಿಂದ ಬರುವ ವಾಹನ ಸವಾರರಿಗೆ ನಾಯಿಗಳ ಕೊರಳಿಗೆ ಹಾಕಿರುವ ಬೆಲ್ಟ್ ವಾಹನಗಳ ಬೆಳಕಿನಿಂದ ಪ್ರತಿಫಲಿಸುವ ಕಾರಣದಿಂದ ನಾಯಿಗಳನ್ನು ತಪ್ಪಿಸಿಕೊಂಡು ನಿಧಾನವಾಗಿ ಚಲಿಸಿಕೊಂಡು ಹೋಗಲು ಸಹಕಾರಿಯಾಗುತ್ತದೆ. ಶ್ವಾನಗಳು ಹೆಚ್ಚಾಗಿ ಕಂಡು ಬರುವ ಮಂಗಳೂರಿನ ನಗರಗಳಲ್ಲಿ ಒಟ್ಟು 500 ಶ್ವಾನಗಳಿಗೆ ಬೆಲ್ಟ್ ಅಳವಡಿಸಿದ್ದು, 300 ಬೆಲ್ಟ್ ಪ್ರಾಯೋಜಕರ ನೆರವಿನಿಂದ ಅಳವಡಿಸಿ 200 ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸಿದ್ದಾರೆ. ವಿದೇಶದಿಂದ ಈ ಬೆಲ್ಟ್‌ಗಳನ್ನು ತರಿಸಲಾಗುತ್ತಿದ್ದು, ಒಂದು ಬೆಲ್ಟ್ ಗೆ ಸುಮಾರು 40 ರೂಪಾಯಿ ವೆಚ್ಚ ತಗಲುತ್ತದೆ ಎಂದು ಪ್ರಾಣಿಪ್ರಿಯ ತೌಸಿಫ್ ತಿಳಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv