‘ಚುನಾವಣೆ ತರಾತುರಿಯಲ್ಲಿ ಸಚಿವಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಅವ್ಯವಹಾರ’

ಹುಬ್ಬಳ್ಳಿ: ಕರ್ನಾಟಕ ಸಚಿವಾಲಯದ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಇದರಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹಾಗೂ ವಿಧಾನ ಸಭೆ ಕಾರ್ಯದರ್ಶಿ ಎಂ. ಮೂರ್ತಿ ಸೇರಿದಂತೆ ಇತರರು ಅಕ್ರಮ ಎಸಗಿದ್ದಾರೆ ಎಂದು ಸಮಾಜ‌ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿ ಮಾಡುವಲ್ಲಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ನಾವು ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೇವೆ. ಅಲ್ಲದೇ, ಚುನಾವಣೆ ಮುನ್ನ ತರಾತುರಿಯಲ್ಲಿ ನೇಮಕಾತಿ ನಡೆದಿದ್ದು, ಇದೊಂದು ಗಂಭೀರ ಭ್ರಷ್ಟಾಚಾರ ಪ್ರಕರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಸೂಕ್ತ ತನಿಖೆ ನಡೆಸಿ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾಗಿ ಹಿರೇಮಠ್​ ತಿಳಿಸಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್ ಅವ್ಯವಹಾರದಲ್ಲಿ ತೊಡಗಿದ್ದಾರೆ:
ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವ್ಯವಹಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ ಇತ್ತೀಚೆಗೆ ತೆರಿಗೆ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿರುವ 33 ಪುಟಗಳ ವಿವರವಾದ ಚಾರ್ಜಶೀಟ್. ಈ ಕುರಿತಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿರೇಮಠ್ ಇದೇ ವೇಳೆ ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv