ಮೊಬೈಲ್ ಬಳಸಬೇಡ ಅಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನ, ದೇವರೇ ಆತನನ್ನ ಕಾಪಾಡಿದ್ದಾನೆ: ಸಿಎಂ

ಬೆಂಗಳೂರು: ಮೊಬೈಲ್​ ಹೆಚ್ಚಾಗಿ ಬಳಸಬೇಡ ಅಂತಾ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ವೇಣು ಎಂಬ ಯುವಕ ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಎಂದು ತಿಳಿದು ಬಂದಿದೆ. ವೇಣು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಬಳಿಕ ಪೋಷಕರೊಂದಿಗೆ ಬಸವನಗುಡಿಯ ನೆಟ್ಟಕಲ್ಲಪ್ಪ ರಸ್ತೆಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ. ಅವನ ತಾಯಿ ಮೊಬೈಲ್​ ಅನ್ನು ಹೆಚ್ಚಾಗಿ ಬಳಸಬೇಡ ಅಂತಾ ಬುದ್ಧಿವಾದ ಹೇಳಿದ್ರು. ಈ ವಿಷಯಕ್ಕಾಗಿ ನಿನ್ನೆ ರಾತ್ರಿ ವೇಣು, ತಾಯಿಯೊಂದಿಗೆ ಜಗಳವಾಡಿದ್ದ. ಇಂದು ಬೆಳಿಗ್ಗೆ 9.30ರ ಸುಮಾರಿಗೆ ಮನೆಯಿಂದ ಹೊರಬಂದ ವೇಣು 11.20ರ ವೇಳೆಗೆ ಬಸವನಗುಡಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ.

ಆ ದೇವರೇ ಆತನನ್ನ ಕಾಪಾಡಿದ್ದಾನೆ: ಸಿಎಂ ಕುಮಾರಸ್ವಾಮಿ
ಇಂದು ಮಧ್ಯಾಹ್ನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿಮ್ಹಾನ್ಸ್ ಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ತಂದೆ-ತಾಯಿ ಹೇಳೋ ಬುದ್ಧಿವಾದಕ್ಕೆ ಮನನೊಂದು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸೋಂಭೇರಿ ಆಗಿದ್ದೀಯಾ.. ಅಂತ ತಾಯಿ ಮಗನಿಗೆ ಬೈದಿದ್ದಾರೆ. ಇದರಿಂದ ಮನನೊಂದ ಯುವಕ ಮನೆಯಿಂದ ಹೊರಬಂದಿದ್ದಾನೆ. ಈ ವೇಳೆ ಅವನ ತಾಯಿ ದೇವಸ್ಥಾನಕ್ಕೆ ಹೋಗಿದ್ರಂತೆ. ಆ ದೇವರೇ ಆತನನ್ನ ಕಾಪಾಡಿದ್ದಾನೆ. ವೈದ್ಯರು ಸದ್ಯ ಸಿಟಿ ಸ್ಕ್ಯಾನ್ ಮಾಡಿ, ಹೆಚ್ಚಿನ ಚಿಕಿತ್ಸೆ ನೀಡ್ತಿದ್ದಾರೆ ಅಂತಾ ಹೇಳಿದರು.