ಇದು ಎನ್‌ಆರ್‌ಐ ಕನ್ನಡಿಗರ ‘ರತ್ನ’ಮಂಜರಿ‘!

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಚಿತ್ರಗಳಿಗೇನೂ ಕಡಿಮೆಯಿಲ್ಲ. ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಅನಾವರಣವಾಗ್ತಾನೇ ಇವೆ. ವಿಶೇಷ ಅಂದ್ರೆ, ಎನ್‌ಆರ್‌ಐ ಕನ್ನಡಿಗರು ಕೂಡ ಕನ್ನಡ ಚಿತ್ರ ನಿರ್ಮಾಣಕ್ಕೆ ಧುಮುಕುತ್ತಿದ್ದಾರೆ. ಕನ್ನಡ ಚಿತ್ರರಂಗದ ಕ್ವಾಲಿಟಿಯನ್ನ ಹೆಚ್ಚಿಸುವ ಹಾಗೂ ಪ್ರೇಕ್ಷಕರಿಗೆ ಹೊಸ ಬಗೆಯ ಚಿತ್ರ ನೀಡುವ ಉದ್ದೇಶದಿಂದ ಎನ್‌ಆರ್‌ಐ ಕನ್ನಡಿಗರು ಸಿನಿಮಾರಂಗ ಪ್ರವೇಶ ಮಾಡಿದ್ದಾರೆ. ಇದಕ್ಕೆ ತಾಜ ಉದಾಹರಣೆ ರತ್ನಮಂಜರಿ ಚಿತ್ರ. ಹೌದು, ರತ್ನಮಂಜರಿ ಎನ್‌ಆರ್‌ಐ ಕನ್ನಡಿಗರು ನಿರ್ಮಿಸಿರುವ ಚಿತ್ರ. ಈಗಾಗಲೇ ಚಿತ್ರದ ಟೀಸರ್‌ ಯೂ-ಟ್ಯೂಬ್‌ನಲ್ಲಿ ಸೌಂಡ್ ಮಾಡಿದೆ.

ನಾಳೆಯಿಂದ ಹಾಡುಗಳ ಹಬ್ಬ!
ಎಸ್‌.ಸಂದೀಪ್ ಕುಮಾರ್, ಎನ್‌ಆರ್‌ಐ ಕನ್ನಡಿಗರಾದ ನಟರಾಜ್ ಹಳೇಬಿಡು ಮತ್ತು ಡಾ.ನವೀನ್ ಕುಮಾರ್‌ ಜಂಟಿಯಾಗಿ ನಿರ್ಮಿಸಿರುವ ಚಿತ್ರ ರತ್ನಮಂಜರಿ. ಪ್ರಸಿದ್ಧ್‌ ಆ್ಯಕ್ಷನ್ ಕಟ್ ಹೇಳಿರೋ ಚಿತ್ರದಲ್ಲಿ ನಾಯಕ ನಟನಾಗಿ ರಾಜ್‌ ಚರಣ್ ಹಾಗೂ ನಾಯಕಿ ನಟಿಯಾಗಿ ಅಕಿಲಾ ಪ್ರಕಾಶ್‌ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಜ್‌ ಸಂಗೀತವಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರವಾಗಿದ್ದು, ಮೇಕಿಂಗ್‌ ಅದ್ಭುತವಾಗಿದೆ ಅನ್ನೋದು ಟೀಸರ್‌ನಿಂದಲೇ ಗೊತ್ತಾಗಿದೆ. ವಿಶೇಷ ಅಂದ್ರೆ, ಚಿತ್ರದ ಬಹುತೇಕ ಚಿತ್ರೀಕರಣ ನಡೆದಿರೋದು ವಿದೇಶದಲ್ಲಿ. ನ್ಯೂಯಾರ್ಕ್‌, ನ್ಯೂಜೆರ್ಸಿ, ಮಲೇಷ್ಯಾ ಸೇರಿದಂತೆ ಹಲವೆಡೆ ಶೂಟಿಂಗ್ ನಡೆದಿದೆ. ಅಲ್ಲದೇ, ತಲಕಾವೇರಿಯಲ್ಲಿ ಚಿತ್ರೀಕರಣಗೊಂಡ ಕೊನೆಯ ಚಿತ್ರ ಅನ್ನೋ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಸದ್ಯ ತಲ ಕಾವೇರಿಯಲ್ಲಿ ಚಿತ್ರೀಕರಣಕ್ಕೆ ಅನುಮತಿ ದೊರೆಯುತ್ತಿಲ್ಲ.

ರತ್ನಮಂಜರಿ ಚಿತ್ರದ ಕೆಲ ಹಾಡುಗಳು ಈಗಾಗಲೇ ಯೂ-ಟ್ಯೂಬ್‌ನಲ್ಲಿದೆ. ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಮಿಣ ಮಿಣ ಅನ್ನೋ ಸಾಂಗ್ ಹಾಡಿದ್ದು, 6 ಲಕ್ಷಕ್ಕೂ ಅಧಿಕ ವೀಕ್ಷಕರು ಈ ಲಿರಿಕಲ್ ವಿಡಿಯೋ ಸಾಂಗ್ ನೋಡಿದ್ದಾರೆ. ಅಲ್ಲದೇ, ಬಹುಭಾಷಾ ಗಾಯಕ ಟಿಪ್ಪು ಹಾಡಿರೋ ‘ಒಮ್ಮೆ ನನ್ನವಳು’ ಸಾಂಗ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿದೆ. ಈ ಹಾಡನ್ನ ವೀಕ್ಷಿಸಿದ ನಟ ಶ್ರೀಮುರಳಿ ಚಿತ್ರತಂಡದ ಎಫರ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ಉಳಿದ ಹಾಡುಗಳನ್ನ ವಿಜಯ್‌ ಪ್ರಕಾಶ್‌, ಸಂಚಿತ್‌ ಹೆಗಡೆ ಹಾಗೂ ನಟ ವಸಿಷ್ಠ ಸಿಂಹ ಹಾಡಿದ್ದಾರೆ. ನಾಳೆ ಬಿಡುಗಡೆಯಾಗಲಿರುವ ಹಾಡುಗಳು ಸಂಗೀತ ಪ್ರಿಯರನ್ನ ರಂಜಿಸಲಿದೆ ಅನ್ನೋದು ಚಿತ್ರತಂಡದ ವಿಶ್ವಾಸ. ನಾಳೆ ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ರತ್ನಮಂಜರಿ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುವ ನಿರೀಕ್ಷೆಯಿದೆ.