ನಾಳೆ ರಥಸಪ್ತಮಿ, ಏನಿದರ ವಿಶೇಷ..?!

ಮಾಘ ಮಾಸದ ಶುದ್ಧ ಶುಕ್ಲ ಪಕ್ಷದ ಸಪ್ತಮಿಯ ದಿನವನ್ನ ರಥಸಪ್ತಮಿ ಎಂದು ಆಚರಿಸಲಾಗುತ್ತೆ. ಈ ದಿನ ಸೂರ್ಯ ದೇವನು ಮಂದೇಹನೆಂಬ ದೈತ್ಯನನ್ನ ಸಂಹರಿಸಲು ತನ್ನ ಸಪ್ತ ಕುದುರೆಗಳ ರಥವನ್ನ ತಿರುಗಿಸಿದ ಎಂಬ ನಂಬಿಕೆ ಇದೆ. ಮಾತ್ರವಲ್ಲದೇ ಈ ದಿನವೇ ವಿಶ್ವಕರ್ಮನು, ತ್ರಿಪುರಾಸುರನನ್ನ ಸಂಹರಿಸಲು ಈಶ್ವರನಿಗೆ ರಥವನ್ನ ತಯಾರಿಸಿದ ಎಂಬ ಐತಿಹ್ಯವಿದೆ. ಸೂರ್ಯ, ಆದಿತ್ಯ, ರವಿ, ಮಿತ್ರ, ಸವಿತ, ಅರ್ಕ,ಭಾಸ್ಕರ, ಮರೀಚಿ, ದಿವಾಕರ, ಪ್ರಭಾಕರ, ಭಾನು, ವೈವಸ್ವತ ಎಂಬೆಲ್ಲ ಹೆಸರುಗಳಿಂದ ಸೂರ್ಯನೇ ಪ್ರತ್ಯಕ್ಷ ದೇವರು ಎಂದು ಆತನನ್ನ ಪೂಜಿಸಲಾಗುತ್ತೆ. ಸೂರ್ಯನ ರಥಕ್ಕೆ ಒಂದು ಚಕ್ರವಿದ್ದು ಎಳು ಕುದುರೆಗಳಿವೆ..  ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್‌, ಜಗತೀ, ತ್ರಿಷ್ಟುಪ್‌, ಅನುಷ್ಟುಪ್‌ ಮತ್ತು ಪಂಕ್ತಿ  ಅಲ್ಲದೇ ಸೂರ್ಯನ ಈ ರಥಕ್ಕೆ ಅರುಣಾ ಎಂಬ ಸಾರಥಿಯಿದ್ದಾನೆ ಎಂದು ಪುರಾಣಗಳು ಉಲ್ಲೇಖಿಸುತ್ತವೆ.

ನವಗ್ರಹಗಳಿಗೆ ಸೂರ್ಯನೆ ಅಧಿಪತಿ. ಸೌರಕೇಂದ್ರ ವ್ಯವಸ್ಥೆಯನ್ನು ವಿಜ್ಞಾನಿಗಳು ಪತ್ತೆ ಮಾಡುವ ಮೊದಲೇ, ಪುರಾಣಗಳಲ್ಲಿ ಅದು ಉಲ್ಲೇಖವಾಗಿತ್ತು. ಅದಕ್ಕೆಂದೇ ನಾವು ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಎಂದು ಸೂರ್ಯನ ಪೂಜೆಯನ್ನು ಹಿಂದಿನಿಂದಲೇ ಮಾಡಿಕೊಂಡು ಬರುತ್ತಿದ್ದೇವೆ. ಸಮಸ್ತ ವಿಶ್ವಕ್ಕೂ ಸೂರ್ಯನೇ ಒಡೆಯ ಎಂಬುದನ್ನು ಕಂಡುಕೊಂಡ ನಮ್ಮ ಋಷಿಮುನಿಗಳು ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುತ್ತ ಬಂದಿದ್ದಾರೆ.

ದೈನಂದಿನ ಜೀವನದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯೋಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ. ಅಂತೆಯೇ ಸೂರ್ಯ ನಮಸ್ಕಾರ ಇತ್ಯಾದಿ ಆಚರಣೆಗಳಿಂದ ಮನುಷ್ಯನ ಆರೋಗ್ಯದ ಮೇಲೂ ಹಲವು ಸತ್ಪರಿಣಾಮ ಉಂಟಾಗುತ್ತೆ ಎಂಬುದು ಸಾಬೀತಾಗಿದೆ. ಜಗತ್ತಿನ ಮುಂದುವರಿಕೆಗೆ  ಶ್ರೀ ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಇಂದು ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಚಳಿಗಾಲವು ಮುಗಿದು ಬೇಸಿಗೆಯ ಕಾಲ ಪ್ರಾರಂಭವಾಗುವುದು.

ಸೂರ್ಯನ ಪೂಜೆ ಏಕೆ ?

ಪುರಾಣಗಳು ” ಆರೋಗ್ಯಂ ಭಾಸ್ಕರಾದಿಚೇತ್” ಎಂದು ಹೇಳುತ್ತವೆ ಅಂದರೆ ಜೀವಿಯ ಆರೋಗ್ಯವನ್ನ ಸೂರ್ಯ ನೀಡುತ್ತಾನೆ ಎಂದರ್ಥ. ಅಲ್ಲದೇ ಬೆಳಗಿನ ಸೂರ್ಯನ ಎಳೆಬಿಸಿಲಿನಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ ಡಿ ಅಂಶ ಸೂರ್ಯಕಿರಣದಲ್ಲಿ ಹೇರಳವಾಗಿರುತ್ತದೆ. ಆದ್ದರಿಂದ ಸೂರ್ಯನನ್ನು ಪೂಜಿಸಲಾಗುತ್ತದೆ.

ರಥಸಪ್ತಮಿ ಪವಿತ್ರ ಸ್ನಾನ ಮಹತ್ವ ಮತ್ತು ಕ್ರಮ

ಸನಾತನ ಧರ್ಮದ ಪ್ರತಿ ಆಚರಣೆಯ ಹಿಂದೆ ಪರಿಸರ, ಸಾಮಾಜಿಕ ಮತ್ತು ವೈಯಕ್ತಿಕ ಉದ್ದೇಶಗಳಿವೆ. ಅಂತೆಯೇ ರಥಸಪ್ತಮಿಯ ದಿನ ಏಕ್ಕದ ಎಲೆಗಳನ್ನ ಭಗವಂತನಿಗೆ ಸಮರ್ಪಿಸುವ ಕ್ರಮವಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದೇನೆಂದರೆ,

  1. ಮಾಘ ಮಾಸದಲ್ಲಿ(ಜನವರಿ-ಫೆಬ್ರವರಿ) ರೋಗ ನಿವಾರಕವಾಗಿರುವ ಸೂರ್ಯನ ಪ್ರಖರ ಕಿರಣಗಳು ಏಕ್ಕದ ಎಲೆಗಳ ಮೇಲೆ ಬೀಳುತ್ತವೆ. ಅವುಗಳನ್ನ ನಾವು ಸ್ಪರ್ಶ ಮಾಡುವುದರಿಂದ ಮತ್ತು ದೇವರಿಗೆ ಸಮರ್ಪಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬ ಐತಿಹ್ಯವಿದೆ.
  2. ಅಲ್ಲದೇ ಈ ದಿನ ಮಾಡುವ ಕ್ರಮಬದ್ದ ಪುಣ್ಯ ಸ್ನಾನದಿಂದ ಮತ್ತು ಮೇಲೆ ತಿಳಿಸಿದಂತೆ ಏಕ್ಕದ ಎಲೆಗಳ ಸ್ಪರ್ಶದಿಂದ ರೋಗಗಳು ನಿವಾರಣೆಯಾಗುತ್ತದೆ.
  3. ಅರ್ಕ ಪತ್ರೆ ಸ್ನಾನದಿಂದ ಸಪ್ತ ಜನ್ಮ ಪಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆಯಿದೆ
  4. ಈ ದಿನ ಸೂರ್ಯೋದಯಕ್ಕೂ ಸೂರ್ಯನಿಗೆ ಪ್ರಿಯವಾದ ಏಕ್ಕದ ಪತ್ರೆಗಳನ್ನ ಕ್ರಮವಾಗಿ ತಲೆ ಮೇಲೆ ಒಂದು, ಭುಜಗಳ ಮೇಲೆ ಎರಡು, ಮಂಡಿಗಳ ಮೇಲೆ ಎರಡು ಮತ್ತು ಪಾದಗಳ ಮೇಲೆ ಎರಡು ಪತ್ರೆಗಳನ್ನ ಇಟ್ಟು ಸ್ನಾನ ಮಾಡಲಾಗುತ್ತೆ.
  5. ಈ ದಿವಸ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸ ನೈವೇದ್ಯ ಮಾಡಿ ಪ್ರಸಾದವೆಂದು ಸೇವಿಸಲಾಗುತ್ತೆ
  6. ಈ ದಿನ ಮಹಿಳೆಯರು ಮನೆಯ ಮುಂದೆ ಮತ್ತು ತುಳಸಿ ಬೃಂದಾವನದ ಮುಂದೆ ರಂಗೋಲಿಯಲ್ಲಿ ರಥ ಮತ್ತು ಏಳು ಅಶ್ವಗಳನ್ನ ಬಿಡಿಸಿ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ಭಾರತದಲ್ಲಿನ ಪ್ರಖ್ಯಾತ ಸೂರ್ಯ ದೇವಾಲಯಗಳು

ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್‌ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.

ವಿಶೇಷ ಬರಹ: ಪ್ರಜ್ವಲಾ ಹೊರನಾಡು


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv