ಗ್ರಾಮದೇವತೆ ಹೆಸರಲ್ಲಿ ರಮೇಶ್‌ ಜಾರಕಿಹೊಳಿ ಪ್ರಮಾಣ ಸ್ವೀಕರಿಸಿದ್ದೇಕೆ..?

ಬೆಳಗಾವಿ: ಹಲವು ದಶಗಳಿಂದ ತಮ್ಮ ಕುಟುಂಬ ನಂಬಿಕೊಂಡು ಬಂದಿದ್ದ ಗ್ರಾಮದೇವತೆ ಲಕ್ಷ್ಮಿದೇವಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ನೂತನ ಸಚಿವ ರಮೇಶ ಜಾರಕಿಹೊಳಿ ಗ್ರಾಮದೇವತೆಗೆ ನಮನ ಸಲ್ಲಿಸಿದ್ದಾರೆ.

ಇವತ್ತು ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಎಲ್ಲರೂ ದೇವರು ಸೇರಿದಂತೆ ವಿವಿಧ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರೆ ಸಚಿವ ರಮೇಶ ಜಾರಕಿಹೊಳಿ ಮಾತ್ರ ತಮ್ಮ ಗ್ರಾಮದೇವತೆ ಅದರಲ್ಲೂ ತಮ್ಮ ಕುಟುಂಬ ತಲೆಮಾರಿನಿಂದ ಆರಾಧನೆ ಮಾಡಿಕೊಂಡು ಬಂದಿರುವ ಲಕ್ಷ್ಮೀ ದೇವತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು.

ಸಚಿವ ರಮೇಶ ಜಾರಕಿಹೊಳಿ ಅವರ ತಂದೆ ದಿವಂಗತ ಲಕ್ಷ್ಮಣರಾವ್ ಜಾರಕಿಹೊಳಿ ಗ್ರಾಮ ದೇವತೆ ಲಕ್ಷ್ಮೀಯನ್ನ ಆರಾಧಿಸುತ್ತಿದ್ದರು. ಕಷ್ಟ ಕಾಲದಲ್ಲಿ ದೇವತೆಯ ಮೊರೆ ಹೋದ್ರೆ ಕಷ್ಟ ದೂರವಾಗುತ್ತೆ, ಅಂದುಕೊಂಡಿದ್ದು ಈಡೇರುತ್ತೆ ಎನ್ನುವ ನಂಬಿಕೆ ಇಟ್ಟುಕೊಂಡು ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದರು. ಭಕ್ತಿಯಿಂದ ದೇವಿಯ ಆರಾಧನೆ ಮಾಡುತ್ತಿದ್ದರು. ಅದಾದ ನಂತರ ಜಾರಕಿಹೊಳಿ ಕುಟುಂಬದ ಹಿರಿಯ ಸಹೋದರ ರಮೇಶ ಜಾರಕಿಹೋಳಿ ಈ ದೇವತೆಯ ಆರಾಧನೆ ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ ಗ್ರಾಮದೇವತೆಯನ್ನು ಬಲವಾಗಿ ನಂಬಿಕೊಂಡಿದ್ದಾರೆ. ಅವರು ಎಷ್ಟೊಂದು ನಂಬಿಕೊಂಡಿದ್ದಾರೆ ಎಂಬುದಕ್ಕೆ ಇವತ್ತು ಸಚಿವರಾಗಿ ಪ್ರಮಾಣ ವಚನವನ್ನೂ ಲಕ್ಷ್ಮೀ ದೇವತೆ ಹೆಸರಿನಲ್ಲಿ‌ ಸ್ವೀಕರಿಸುವ ಮೂಲಕ ದೇವಿಗೆ ನಮನ ಸಲ್ಲಿಸಿದ್ದಾರೆ. ಇನ್ನೂ ಇಡೀ ಜಾರಕಿಹೋಳಿ ಕುಟುಂಬ ಲಕ್ಷ್ಮೀ‌ ದೇವತೆಯ ಭಕ್ತರು ಎನ್ನುವುದು ವಿಶೇಷ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv