ರಮೇಶ್ ಜಾರಕಿಹೊಳಿ ಪ್ರಯತ್ನಕ್ಕೆ ನಿಜಕ್ಕೂ ಯಶಸ್ಸು ಸಿಗುತ್ತದಾ..!?

ಬೆಂಗಳೂರು: ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ನಿನ್ನೆಯೇ ಅವರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದ್ರೆ ಒಬ್ಬರೇ ರಾಜೀನಾಮೆ ನೀಡದ್ರೆ ಸಾಲದಾಗುತ್ತದೆ. ಹಾಗಾಗಿ ಇನ್ನೂ ಒಂದಷ್ಟು ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ ಎಂದು ಹೇಳಲಾಗಿತ್ತು. ಆ ಪ್ರಯತ್ನವಾಗಿ ಅತೃಪ್ತ ಕೈ ಶಾಸಕರಮ್ಮ ಒಂದೆಡೆ ಸೇರಿಸಲು ಖುದ್ದು ರಮೇಶ್​, ಹರಸಾಹಸ ನಡೆಸುತ್ತಿದ್ದಾರೆ. ತಮ್ಮ ಜೊತೆ ಹಲ ಅತೃಪ್ತ ಶಾಸಕರನ್ನ ಬಿಜೆಪಿಗೆ ಕರೆದೊಯ್ಯುವುದು ಅವರ ಪ್ರಯತ್ನವಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ ನಿನ್ನೆಯೇ ಬೆಂಗಳೂರಿಗೆ ಆಗಮಿಸಿರುವ ರಮೇಶ್ ಗಾಲ್ಫ್ ರಸ್ತೆಯ ಸೆವೆನ್ ಮಿನಿಸ್ಟರ್ಸ್​ ಕ್ವಾಟ್ರಸ್ ನಲ್ಲಿ ತಮ್ಮ ಆಪ್ತರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸಾಮೂಹಿಕವಾಗಿ ರಾಜೀನಾಮೆ ಕೊಡಬೇಕೆಂಬ ಕಾರಣಕ್ಕೆ ಅತೃಪ್ತರ ಸಂಪರ್ಕ ನಡೆಸುತ್ತಿದ್ದಾರೆ. ಆಪ್ತ ಮಹೇಶ್ ಕುಮಟಳ್ಳಿ, ನಾಗೇಂದ್ರ ಜೊತೆಯಲ್ಲಿ ಇದ್ದರೂ ಅತೃಪ್ತರನ್ನ ಒಂದೆಡೆ ಸೇರಿಸಲು ಶತಪ್ರಯತ್ನ ನಡೆದಿದೆ. ಆದ್ರೆ ಕೆಲ ಅತೃಪ್ತರು, ದೂರವಾಣಿ ಮೂಲಕ ಪ್ರಯತ್ನ ನಡೆಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಮೇಶ್ ಪ್ರಯತ್ನಕ್ಕೆ ನಿಜಕ್ಕೂ ಯಶಸ್ಸು ಸಿಗಲಿದೆಯಾ ಎಂಬುದು ಅನುಮಾನವಾಗಿದೆ.