ರಮೇಶ್ ಅರವಿಂದ್​: ನಿಜವಾದ ಹೀರೋ ನಾವಲ್ಲ, ನೀವು ಅಂದಿದ್ಯಾರಿಗೆ?

ಸಿದ್ದಾಪುರ: ಸದಾ ಹಸನ್ಮುಖಿ ಎಂದೇ ಪ್ರಖ್ಯಾತಿ ಹೊಂದಿರುವ ಖ್ಯಾತ ಚಿತ್ರನಟ, ಆಪ್ತಮಿತ್ರ ರಮೇಶ್ ಅರವಿಂದ್​, ಸಿದ್ದಾಪುರದ ಹಾಳದಕಟ್ಟಾದಲ್ಲಿರುವ ಮುರುಘರಾಜೇಂದ್ರ ಅಂಧರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು.

ಆಶಾಕಿರಣ ಟ್ರಸ್ಟ್​ನ ಟ್ರಸ್ಟಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್, ಈ ಸನ್ಮಾನ ನನಗೆ ಸಲ್ಲುವುದಲ್ಲ. ಇದು ನಿಮಗೆ ಸಲ್ಲಬೇಕು. ನಾವು ನಿಜವಾದ ಹೀರೋಗಳಲ್ಲ. ಕತ್ತಲೆಯಲ್ಲಿದ್ದರೂ ಕೂಡ ಇತರರಿಗೆ ಬೆಳಕು ಚೆಲ್ಲುವ ನಿಮ್ಮಂತಹ ಅಂಧ ವಿದ್ಯಾರ್ಥಿಗಳು ನಿಜವಾದ ಹೀರೋಗಳು. ಈ ಸಂಸ್ಥೆಯನ್ನು 25 ವರ್ಷಗಳಿಂದ ನಡೆಸಿಕೊಂಡು ನಿಮ್ಮನ್ನೆಲ್ಲ ಬೆಳೆಸುತ್ತಿರುವ ಟ್ರಸ್ಟಿಗಳು ನಿಜವಾದ ಹೀರೋಗಳು ಎಂದರು.

ಆಗಿನ ಕಾಲದಲ್ಲಿ ಸಿನಿಮಾಗಳು ವರ್ಷಗಳ ಕಾಲ ಓಡುತ್ತಿದ್ದವು. ಆದ್ರೆ ಈಗ ಕಾಲ ಬದಲಾಗಿದೆ. ಸಿನಿಮಾಗಳು  ಬಿಡುಗಡೆಯಾಗುವುದೇ ಒಂದು ದೊಡ್ಡ ಯಶಸ್ಸು ಎನ್ನುವಂತಾಗಿದೆ. ನೀವೆಲ್ಲ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಬೇಕು. ಸರಿಯಾದ ಗುರಿಯೊಂದಿಗೆ ಮುಂದೆ ಸಾಗಿ, ಗುರಿಯನ್ನು ತಲುಪಿ. ನಿಮ್ಮೊಂದಿಗೆ ಕಾಲ ಕಳೆದದ್ದು ನನ್ನ ಜೀವನದ ಒಂದು ಸುಂದರ ಕ್ಷಣ. ಮುಂದೆಯೂ ಆಗಾಗ ಇಲ್ಲಿ ಬಂದು ಕಾಲ ಕಳೆಯುತ್ತೇನೆ ಎಂದರು.

ನಂತರ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಯಾಗಿ ಬೆರೆತು ಬ್ರೈಲ್ ಲಿಪಿ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿಯೊಬ್ಬರನ್ನು ವೇದಿಕೆಗೆ ಕರೆಸಿ ‘ರಮೇಶ್ ಸೆಲ್ಯೂಟ್ಸ್ ಯು’ ಅಂತ ಬ್ರೈಲ್ ಲಿಪಿಯಲ್ಲಿ ಬರೆಸಿ ಸಂತಸಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv