ದೈವಕ್ಷೇತ್ರಕ್ಕೆ ದೂರು ಸಲ್ಲಿಸಿದ ಮಾಜಿ ಸಚಿವ ರಮಾನಾಥ್ ರೈ

ಮಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ್ ರೈ ಬಂಟ್ವಾಳದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಇದೀಗ ತನ್ನ ಸೋಲಿಗೆ ನನ್ನ ಮೇಲೆ ಮಾಡಿರುವ ಅಪಪ್ರಚಾರವೇ ಕಾರಣ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯದೇಗುಲ ಎಂದೇ ಹೆಸರುವಾಸಿಯಾಗಿರುವ ಕಾನತ್ತೂರು ಕ್ಷೇತ್ರದ ಮೊರೆ ಹೋಗಿದ್ದಾರೆ.

ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ಶರತ್ ಮಡಿವಾಳ ಹತ್ಯೆಯಾಗಿತ್ತು. ಈ ಸಂಬಂಧ ಮೃತ ಶರತ್ ಮಡಿವಾಳನ ತಂದೆ ತನಿಯಪ್ಪ ಮಡಿವಾಳ ಅವರು ನನ್ನ ಮಗನ ಕೊಲೆಯನ್ನು ಸಚಿವ ಬಿ.ರಮಾನಾಥ ರೈ ಮತ್ತು ಅವರ ಬೆಂಬಲಿಗರ ತಂಡ ನಡೆಸಿದೆ ಎಂದು ಕೆಲ ಸಮಯದ ಹಿಂದೆ ಆರೋಪಿಸಿದ್ದರು. ಇದರಿಂದ ಮನನೊಂದಿರುವ ಮಾಜಿ ಸಚಿವ ಬಿ.ರಮಾನಾಥ ರೈ ಶನಿವಾರ ಕಾರಣಿಕ ಕ್ಷೇತ್ರ ಶ್ರೀ ನಾಲ್ಕರ್ ದೈವಸ್ಥಾನ ಕಾಣತ್ತೂರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.

ಈ ಪ್ರಕರಣದಲ್ಲಿ ವಿನಾಕಾರಣ ನನ್ನ ಹೆಸರನ್ನು ಬಳಸಿ ಅಪಪ್ರಚಾರ ನಡೆಸಲಾಗಿದೆ. ಇದರಿಂದ ಮಾನಸಿಕವಾಗಿ ನನಗೆ ತೀವ್ರ ನೋವಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಬೇಕು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವವರನ್ನು ಕರೆದು ವಿಚಾರಣೆ ನಡೆಸಬೇಕು ಎಂದು ಬಿ.ರಮಾನಾಥ ರೈಯವರು ದೈವಸ್ಥಾನದ ಪ್ರಮುಖರಲ್ಲಿ ವಿನಂತಿ ಮಾಡಿದ್ದಾರೆ. ಕೇರಳ ರಾಜ್ಯದಲ್ಲಿರುವ ಕಾನತ್ತೂರು ಕ್ಷೇತ್ರ ಸತ್ಯ ಪ್ರಮಾಣಗಳಿಗೆ ಹೆಸರುವಾಸಿಯಾಗಿದೆ. ಇನ್ನು ಮಾಜಿ ಸಚಿವ ರಮಾನಾಥ್ ರೈ ಇಲ್ಲಿಗೆ ದೂರು ಸಲ್ಲಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv