ಸಿಎಂ ಲಿಂಗಪ್ಪ ಪುತ್ರನಿಗೆ ಬಿಜೆಪಿ ಮಣೆ: ಚಂದ್ರಶೇಖರ್ ರಾಮನಗರ ಕ್ಷೇತ್ರದ ಅಭ್ಯರ್ಥಿ

ಬೆಂಗಳೂರು: ಕೊನೆಗೂ ಬಿಜೆಪಿ ರಾಮನಗರ ಉಪಚುನಾವಣೆಯ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಕಾಂಗ್ರೆಸ್​ನ ವಿಧಾನ ಪರಿಷತ್‌ ಸದಸ್ಯ ಸಿಎಂ ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್​ ಅವ್ರಿಗೆ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ಅಭ್ಯರ್ಥಿಯಾಗಿ ರಾಮನಗರ ಜಿಲ್ಲಾ ಅಧ್ಯಕ್ಷ ಎಂ.ಆರ್.ರುದ್ರೇಶ್ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಚಂದ್ರಶೇಖರ್​ ಅವರನ್ನ ಕಣಕ್ಕೆ ಇಳಿಸಿದೆ. ಈ ಹಿಂದೆ ತಂದೆ ಜೊತೆ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಚಂದ್ರಶೇಖರ್, ಅಕ್ಟೋಬರ್ 10 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಕ್ಟೋಬರ್ 16 ರಂದು ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ನವೆಂಬರ್ 3 ರಂದು ಚುನಾವಣೆ ನಡೆಯಲಿದೆ.