ಕೊಡಗು ಮೂಲಕ ಕೇರಳಕ್ಕೆ ರೈಲ್ವೆ ಮಾರ್ಗ! ರಹಸ್ಯ ಸರ್ವೆ ಶುರು, ಜನ ಆಕ್ರೋಶ

ಕೊಡಗು: ಮೈಸೂರು-ತಲಚೇರಿ ಮಾರ್ಗದ ರೈಲ್ವೆ ಯೋಜನೆ, ಜಿಲ್ಲೆಯ ಭೌಗೋಳಿಕ ಸ್ವರೂಪ ಹಾಗೂ ಪರಿಸರಕ್ಕೆ ಮಾರಕವಾಗಿರುವುದೆಂದು ಜಿಲ್ಲೆಯ ಜನ ಪಕ್ಷ ಭೇದ ಮರೆತು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಆದರೆ ಕೊಂಕಣ ರೈಲ್ವೆ ಕಾರ್ಪೋರೇಷನ್​ ಸಂಸ್ಥೆಯ ಸಿಬ್ಬಂದಿ ದಕ್ಷಿಣ ಕೊಡಗಿನಲ್ಲಿ ಸದ್ದಿಲ್ಲದೇ ಇದೀಗ, ಸರ್ವೆ ಕಾರ್ಯ ಶುರು ಮಾಡಿದ್ದಾರೆ.
ದಕ್ಷಿಣ ಕೊಡಗಿನ ಕುಟ್ಟಾ ಕೆ. ಬಾಡಗ ಹಾಗೂ ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಕ್ರವಾರ ಹಲವರು ಓಡಾಡುತ್ತಿದ್ದುದನ್ನು ಕಂಡು ಗ್ರಾಮಸ್ಥರು ವಿಚಾರಿಸಿದ್ದಾರೆ. ಆಗ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ಕುರಿತು ಸರ್ವೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಕ್ಷೆಯೊಂದು ಪತ್ತೆಯಾಗಿದ್ದು, ಅದರಲ್ಲಿ ಸದರಿ ರೈಲ್ವೆ ಮಾರ್ಗದ ವಿವರ ಕಂಡುಬಂದಿದೆ.

ಸದರಿ ಮಾರ್ಗವು ಮೈಸೂರಿನ ಹುಣಸೂರಿನಿಂದ ತಿತಿಮತಿ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶಿಸಲಿದೆ. ಅಲ್ಲಿಂದ ಮುಂದಕ್ಕೆ ಹಲವು ಕಡೆಗಳಲ್ಲಿ ಸುರಂಗ ಮಾರ್ಗಗಳಲ್ಲಿ ಸಾಗಿ, ಕುಟ್ಟದಿಂದ ಕೇರಳದ ಕಾಟಿಕೊಳಕ್ಕೆ ಸಂಪರ್ಕ ಕಲ್ಪಿಸಲಿದೆ.
ಆದರೆ ಯಾವುದೇ ಕಾರಣಕ್ಕೂ ಕೊಡಗಿನ ಮೂಲಕ ಕೇರಳಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ನಾವು ಅವಕಾಶ ಮಾಡಿಕೊಡುವುದಿಲ್ಲಾ ಅಂತಾ ಅಲ್ಲಿನ ಜನಪ್ರತಿನಿಧಿಗಳೂ ಸೇರಿದಂತೆ ಸಾರ್ವಜನಿಕರು ಏಕದನಿಯಲ್ಲಿ ಹೇಳುತ್ತಿದ್ದಾರೆ. ಆದರೂ, ಜಿಲ್ಲೆಯ ಜನರನ್ನು ವಂಚಿಸಿ, ಈ ಯೋಜನೆ ಜಾರಿಗೆ ತರುವ ಎಲ್ಲಾ ಸೂಚನೆಗಳೂ ಕಂಡುಬಂದಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv