ಪಾರಂಪರಿಕ ಕಟ್ಟಡ ಕೆಡವಿದ ರೈಲ್ವೆ ಇಲಾಖೆ- ಸಚಿವ ಸಾ.ರಾ.ಮಹೇಶ್​​, ಅಧಿಕಾರಿಗಳ ಮಧ್ಯೆ ವಾಗ್ವಾದ!

ಮೈಸೂರು: ರೈಲ್ವೇ ಇಲಾಖೆ ರಾಜ್ಯ ಪ್ರವಾಸೋದ್ಯಮ ಸಚಿವರ ಮಾತಿಗೆ ಕ್ಯಾರೇ ಅಂತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಮೈಸೂರು ರೈಲು ನಿಲ್ದಾಣದ ಮುಂಭಾಗ ಈ ಹಿಂದೆ ಇದ್ದ ಕಾಂಪೌಂಡ್ ಕಟ್ಟಡ ಕೆಡವಿ ನೂತನ‌ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಪಾರಂಪರಿಕ ಕಟ್ಟಡ ಕೆಡವಬಾರದೆಂದು ಪ್ರವಾಸೋದ್ಯಮ ಇಲಾಖೆ ತಿಳಿಸಿತ್ತು. ಆದ್ರೆ ಪ್ರವಾಸೋದ್ಯಮ ಇಲಾಖೆ ಮಾತಿಗೆ ಸೊಪ್ಪಾಕದೇ ಚುನಾವಣೆ ನೀತಿ ಸಂಹಿತೆ ಇರುವಾಗಲೇ ಕಾಮಗಾರಿ ನಡೆಸಲಾಗುತ್ತಿದೆ.

ನಿನ್ನೆ ಚುನಾವಣೆ ‌ನೀತಿ ಸಂಹಿತೆ ಮುಗಿದ ಮೇಲೆ ರೈಲ್ವೇ ಅಧಿಕಾರಿಗಳು ಹಾಗೂ ಸಚಿವ ಸಾರಾ ಮಹೇಶ್ ಮಧ್ಯೆ ಚರ್ಚೆ ನಡೆಯಿತು. ಈ ವೇಳೆ ಮೈಸೂರು ವಲಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಹಾಗೂ ಸಚಿವ ಸಾರಾ ಮಹೇಶ್ ನಡುವೆ ವಾಗ್ವಾದ ಏರ್ಪಟ್ಟಿತು. ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ಸಚಿವ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ರು. ಸಚಿವ, ಡಿಆರ್‌ಎಂ ಮಾತಿನ‌ ಚಕಮಕಿ ವೇಳೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮೂಖ‌ಪ್ರೇಕ್ಷಕನಂತೆ ನಿಂತಿದ್ದರು. ಸಚಿವರ ಮಾತಿಗೆ ಕವಡೆ ಕಿಮ್ಮತ್ತು‌ ಕೊಡದೇ ತಾವು ಮಾಡ್ತಿರೋದು ಸರಿ ಎಂದು ಡಿಆರ್‌ಎಂ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇನ್ನು ರೈಲ್ವೇ ಇಲಾಖೆ ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆಯದೇ ಮೈಸೂರು ರೈಲ್ವೇ ಜಂಕ್ಷನ್ ಮುಂಭಾಗದ ನೂತನ ಕಮಾನುಗಳ ನಿರ್ಮಾಣ ಮಾಡಲಾಗ್ತಿದ್ದು, ಈ ಹಿಂದೆ ಇದ್ದ ಪಾರಂಪರಿಕ ಹಳೆಯ ಕಾಂಪೌಂಡ್ ಕೆಡವಿ ನೂತನ ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಪಾಲಿಕೆ, ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಇಲಾಖೆಯಿಂದ ಅನುಮತಿ ಪಡೆದಿಲ್ಲವೆಂಬ ಆರೋಪ ಕೇಳಿಬಂದಿದೆ. ನಿನೆಯಷ್ಟೇ ಸಂಸದ ಪ್ರತಾಪ್ ಸಿಂಹ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಸರಿಯಿದೆ ಎಂದಿದ್ದರು. ಸಂಸದರ ಭೇಟಿ ಬೆನ್ನಲ್ಲೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಭೇಟಿ ನೀಡಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv