ಈಶಾನ್ಯ ಪದವೀಧರ ಕ್ಷೇತ್ರದ ಮತದಾನ ಶಾಂತಿಯುತ

ರಾಯಚೂರು: ವಿಧಾನ ಪರಿಷತ್​ನ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಇಂದು ನಡೆದ ಮತದಾನ ಪ್ರಕ್ರಿಯೆ ರಾಯಚೂರು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 12007 ಜನ ಮತದಾರರಿದ್ದು, 27 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೂ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 12007 ಮತದಾರರಲ್ಲಿ ಒಟ್ಟು 8067 ಮತದಾರರು ಮತ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಸರಾಸರಿ ಶೇಕಡಾ 67.16 ರಷ್ಟು ಮತದಾನವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 10 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ತುಂಬಿದ್ದಾರೆ. ಮತ ಪೆಟ್ಟಿಗೆಗಳನ್ನು ಚುನಾವಣಾಧಿಕಾರಿಗಳು ಸ್ಟ್ರಾಂಗ್ ರೂಂನಲ್ಲಿ ಭದ್ರಗೊಳಿಸಿದ್ದಾರೆ. ಇದೇ 12 ರಂದು ಕಲಬುರ್ಗಿ ವಿವಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಬುದ್ಧಿವಂತ ಮತದಾರ ಪ್ರಭು ಯಾರಿಗೆ ವಿಜಯ ಮಾಲೆ ತೊಡಿಸಿದ್ದಾನೆ ಅನ್ನೋದು ಅಂದೇ ಗೊತ್ತಾಗಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv