ಹೀಗೊಬ್ಬ ವಿದ್ಯಾವಂತ ಮಾದರಿ ಯುವ ರೈತ

ರಾಯಚೂರು: ಇತ್ತೀಚಿನ ವರ್ಷಗಳಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಫಾರಿನ್ ನಲ್ಲಿ ಕೆಲಸ ಮಾಡಿಕೊಂಡು ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ಕೆಲವರು ನೌಕರಿಗೆ ಗುಡ್ ಬೈ ಹೇಳಿ ಅಗ್ರಿಕಲ್ಚರ್, ಹೈನುಗಾರಿಕೆಗೆ ಜೈ ಎಂದು ಸಕ್ಸಸ್ ಕಂಡಿದ್ದಾರೆ. ಹೌದು ಇಂತಹದರ ಸಾಲಿನಲ್ಲಿ ರಾಯಚೂರಿನ ವಿದ್ಯಾವಂತ ಯುವ ಪ್ರಗತಿಪರ ಫಾರ್ಮರ್ ಸರ್ವೇಶ್ ಕೂಡ ಸೇರುತ್ತಾರೆ.

ರಾಯಚೂರು ತಾಲ್ಲೂಕಿನ ಶಕ್ತಿನಗರದ ನಿವಾಸಿಯಾಗಿರುವ ಸರ್ವೇಶ್ ರಾಯಡು ಮೂಲತಃ ಕೃಷಿ ಕುಟುಂಬದಾತ. ತಂದೆ ಕೃಷಿ ಹಾಗೂ ತೋಟಗಾರಿಗೆ ಚಟುವಟಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ರು, ತಂದೆಯ ಹಾದಿಯನ್ನೆ ತುಳಿದ ಸರ್ವೇಶ್ ಕೂಡ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಡಿಗ್ರಿವರೆಗೂ ವಿದ್ಯಾಭ್ಯಾಸ ಮುಗಿಸಿರುವ ಸರ್ವೇಶ್, ಎಲ್ಲೂ ಕೆಲಸಕ್ಕೆ ಹೋಗದೆ ತಂದೆ ಮಾಡುತ್ತಿದ್ದ ಕೃಷಿಗೆ ಹೈಟೆಕ್ ಟಚ್ ಕೊಟ್ಟಿದ್ದಾರೆ. 2006 ರಿಂದ ತೋಟಗಾರಿಕೆ ಇಲಾಖೆಯ ಸೌಲಭ್ಯ, ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅರಂಭಿಸಿದ್ದಾರೆ.

ಸದ್ಯ ಸರ್ವೇಶ್ ತೋಟಗಾರಿಕೆ ಬೆಳೆಯಿಂದಲೇ ವರ್ಷಕ್ಕೆ 40 ಲಕ್ಷಕ್ಕೂ ಅಧಿಕ, ಅಂದ್ರೆ ತಿಂಗಳಿಗೆ 3 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಅಂದಹಾಗೆ ತೋಟಗಾರಿಗೆ ಹಣ್ಣುಗಳಲ್ಲಿ ಕಿಂಗ್ ಎನಿಸಿಕೊಂಡಿರುವ ದಾಳಿಂಬೆ ಹಾಗೂ ಮಾವು ಬೆಳೆಯುತ್ತಿದ್ದಾರೆ. 40 ಎಕರೆಯಲ್ಲಿ ದಾಳಿಂಬೆ ಹಾಗೂ 40 ಎಕರೆ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಸರಿಸುಮಾರು 300 ಟನ್ ದಾಳಿಂಬೆ ಹಾಗೂ 150ಕ್ಕೂ ಹೆಚ್ಚು ಟನ್ ಮಾವಿನ ಫಸಲನ್ನು ತೆಗೆಯುತ್ತಿರುವ ಸರ್ವೇಶ್ ರಾಯಡು, ಬೆಂಗಳೂರು, ಚೆನೈ, ಮುಂಬೈ, ಹೈದ್ರಾಬಾದ್, ಕೋಲ್ಕತ್ತಾ, ದೆಹಲಿ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಯಾಕೆ ಇವರು ಬೆಳೆದಿರುವ ಹಣ್ಣುಗಳನ್ನು ದುಬೈ, ಯುಎಸ್​ಎ, ಇಟಲಿ ದೇಶಗಳಿಗೂ ರಫ್ತು ಮಾಡುತ್ತಿದ್ದಾರೆ.

ಇತರೆ ರೈತರಿಗೆ ಮಾದರಿ ಆಗಿ ಪ್ರೋತ್ಸಾಹಿಸುತ್ತಿರುವ ಸರ್ವೇಶ್
ಇಷ್ಟು ವರ್ಷಗಳ ಕಾಲ ದಾಳಿಂಬೆ ಹಾಗೂ ಮಾವು ಬೆಳೆಯುತ್ತಿರುವ ಸರ್ವೇಶ್ ಕಳೆದ ವರ್ಷದಿಂದ ಫಿಗ್(ಅಂಜೂರ) ಹಣ್ಣನ್ನು ಬೆಳೆಯಲು ಆರಂಭಿಸಿದ್ದಾರೆ. ಈಗಾಗಲೇ 60 ಎಕರೆ ಪ್ರದೇಶದಲ್ಲಿ ಅಂಜೂರ ಗಿಡಗಳನ್ನು ಹಾಕಿರುವ ಸರ್ವೇಶ್ ತಿಂಗಳಿಗೆ 500 ಕೆಜಿ ಫಸಲು ತೆಗೆಯುತ್ತಿದ್ದು ಲಕ್ಷ ಲಕ್ಷ ಹಣ ಎಣಿಸುತ್ತಿದ್ದಾರೆ. ಅಂಜೂರ ಬಡ ರೈತರಿಗೆ ಸಾಕಷ್ಟು ಅನುಕೂಲವಾಗುವ ಬೆಳೆ ಎನ್ನುವ ಸರ್ವೇಶ್ ಒಂದು ಎಕರೆಯಲ್ಲಿ ಬೆಳೆಯುವ ಅಂಜೂರದಿಂದ ರೈತ ಕನಿಷ್ಠ ಅಂದ್ರು ತಿಂಗಳಿಗೆ 20 ಸಾವಿರಕ್ಕೂ ಹೆಚ್ಚು ಆದಾಯ ಗಳಿಸಬಹುದು ಅಂತಾರೆ.

ಅಂಜೂರ ಸಸಿಗಳನ್ನು ರೈತರಿಗೆ ಉಚಿತವಾಗಿ ಕೊಡ್ತಾರೆ ಸರ್ವೇಶ್!
ಕಡಿಮೆ ಖರ್ಚಿನಲ್ಲಿ ರೈತರು ಬೆಳೆಯಬಹುದಾದ ಅಂಜೂರ ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ ಸರ್ವೇಶ್. ತೋಟಗಾರಿಕೆ ಇಲಾಖೆಯ ಸೌಲಭ್ಯ ಪಡೆದುಕೊಂಡು ಒಂದು ಎಕರೆ ಪ್ರದೇಶದಲ್ಲಿ ಅಂಜೂರ ನಾಟಿ ಮಾಡಲು 40 ಸಾವಿರ ಖರ್ಚಾಗುತ್ತಂತೆ. ವರ್ಷಕ್ಕೆ ಅಂಜೂರ ಫಸಲು ಎಕರೆಗೆ ಕಮ್ಮಿ ಅಂದ್ರು 2 ಲಕ್ಷ ಆದಾಯ ರೈತರಿಗೆ ತಂದುಕೊಡುತ್ತದೆ. ತರಕಾರಿಯಂತೆ ಎರಡು ದಿನಗಳಿಗೊಮ್ಮೆ ಅಂಜೂರವನ್ನು ಮಾರುಕಟ್ಟೆಗೆ ಸಾಗಿಸಿ ವರ್ಷಪೂರ್ತಿ ರೈತ ತನ್ನ ಕೈಯಲ್ಲಿ ಹಣ ನೋಡಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದು ಕೊಡುವ ಅಂಜೂರದ ಬಗ್ಗೆ ಸರ್ವೇಶ್ ತಮ್ಮ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಈಗಾಗಲೇ ರೈತರಿಗೆ ಉಚಿತವಾಗಿ ಅಂಜೂರ ಸಸಿಗಳನ್ನು ಕೊಟ್ಟು ರೈತರ 300 ಎಕರೆ ಪ್ರದೇಶದಲ್ಲಿ ಅಂಜೂರ ಬೆಳೆಯನ್ನು ಬೆಳೆಯಲು ಪ್ರೋತ್ಸಾಹ ನೀಡಿದ್ದಾರೆ. ತಾನೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತ ಬಂಪರ್ ಆದಾಯ ಗಳಿಸುತ್ತಿರುವ ಪ್ರಗತಿಪರ ಯುವ ರೈತ ಸರ್ವೇಶ್ ರಾಯಡು, ಕೃಷಿಯಲ್ಲಿ ಏನೂ ಇಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ರೈತರಿಗೆ ಮಾದರಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv