ರಾಯಚೂರು ಕೃಷಿ ವಿವಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ?

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ.
2017-18ನೇ ಸಾಲಿನಲ್ಲಿ ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರ 7 ಹುದ್ದೆಗಳ ನೇಮಕಾತಿ ಆದೇಶ ಹೊರಡಿಸಿತ್ತು. 7 ಹುದ್ದೆಗಳ ಪೈಕಿ, 3-ಹುದ್ದೆಗಳು ಜನರಲ್ ಮೇರಿಟ್‌, 1- ಎಸ್ ಟಿ, 2- ಎಸ್ ಸಿ ಮತ್ತು 1-ಕ್ಯಾಟಗರಿ (ವರ್ಗ) 1 ಕ್ಕೆ ಮೀಸಲಿಡಲಾಗಿತ್ತು. ಅದರಂತೆ ಇದೇ ವಿವಿಯಲ್ಲಿ ಓದಿರುವ, ರಾಯಚೂರು ಜಿಲ್ಲೆಯ ನಿವಾಸಿ ವಿ. ಹನುಮಂತ ನಾಯಕ್ ಎಸ್ ಟಿ ಗೇ ಮೀಸಲಿದ್ದ 1 ಹುದ್ದೆಗೆ ಅರ್ಜಿ ಸಲ್ಲಿಸಿ, ರಿಟ್ ಪರೀಕ್ಷೆ ಬರೆದು ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚಿಗೆ ಅಂಕ ಪಡೆದಿದ್ದರು. ಅತಿ ಹೆಚ್ಚು ಅಂಕಗಳಿಸಿ ಹುದ್ದೆಗೆ ಎಲಿಜೆಬಲ್ ಆಗಿದ್ದ ಹನುಮಂತ ನಾಯಕ್ ಅವರನ್ನು ಆಯ್ಕೆ ಮಾಡಬೇಕಾಗಿತ್ತು. ಆದ್ರೆ ಕೃಷಿ ವಿವಿ ಆಡಳಿತ ಮಂಡಳಿ ಅಭ್ಯರ್ಥಿ ವಿ. ಹನುಮಂತ ನಾಯಕ್ ಅವರನ್ನು ಆಯ್ಕೆ ಮಾಡದೇ, ನೇಮಕಾತಿಯಲ್ಲಿ ಅಕ್ರಮ ನಡೆಸಿ, ಮೆರಿಟ್ ಕಾಯ್ದಿರಿಸಿದ್ದ ಸ್ಥಾನದಲ್ಲಿದ್ದ ಅಭ್ಯರ್ಥಿ ಪ್ರವೀಣ್ ಎಂಬುವವರನ್ನು ಆಯ್ಕೆ ಮಾಡಿದ್ದಾರೆ ಎಂದು ಹುದ್ದೆಯಿಂದ ವಂಚಿತ ಅಭ್ಯರ್ಥಿ ವಿ. ಹನುಮಂತ ನಾಯಕ್ ವಿವಿ ವಿರುದ್ದ ಆರೋಪ ಮಾಡಿದ್ದಾರೆ. ಇನ್ನು ಧಾರವಾಡ ಕೃಷಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಹನುಮಂತ್ ನಾಯಕ್ ಅವರು ಆಯ್ಕೆ ಸಂದರ್ಭದಲ್ಲಿ‌ ಬೇಕಾಗಿರುವ ಎನ್ಓಸಿ ( ನಿರಪೇಕ್ಷಣಾ) ಪತ್ರ ಪಡೆಯಲು ಕೋರ್ಟ್ ಮೊರೆ ಹೋಗಿ ಪಡೆದಿದ್ದಾರೆ. ಇಷ್ಟೆಲ್ಲಾ ಕಷ್ಟ ಪಟ್ಟು, ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಪಡೆದು ನೇಮಕಾತಿಗೆ ಬೇಕಾಗಿರುವ ಎಲ್ಲಾ ದಾಖಲೆಗಳು ಸಲ್ಲಿಸಿದ್ರು, ಅವ್ಯವಹಾರ ನಡೆಸಿ ಉದ್ಯೋಗ ಬೇರೆ ಅಭ್ಯರ್ಥಿಗೆ ನೀಡಿದ್ದನ್ನು ವಿರೋಧಿಸಿ, ನೊಂದ ಹನುಮಂತ ನಾಯಕ್ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಆಗ ವಿಶೇಷ ಚೇತನರಿಗೆ ಮೀಸಲಿದ್ದ ಹುದ್ದೆಯನ್ನು ಪರಿಷ್ಕರಿಸಿ, ಹುದ್ದೆ ನೀಡುವುದಾಗಿ ವಿವಿ ಆಡಳಿತ ಮಂಡಳಿ, ಹನುಮಂತ ನಾಯಕ್​ಗೆ ತಿಳಿಸಿದಾಗ ಕೇಸ್ ವಾಪಸ್ ಪಡೆದಿದ್ದಾರೆ. ಸದ್ಯ ಹುದ್ದೆ ಪರಿಷ್ಕರಣೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿ ಹನುಮಂತ ನಾಯಕ್ ಹುದ್ದೆಯಿಂದ ವಂಚಿತರಾದಂತಾಗಿದೆ.
ಸದ್ಯ ಕೃಷಿ ವಿವಿ ಆಡಳಿತ ಮಂಡಳಿ ವಿರುದ್ಧ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿ ಕಾನೂನಿನ ಫೈಟ್ ಮಾಡಲು ನೊಂದ ಅಭ್ಯರ್ಥಿ ಹನುಮಂತ ನಾಯಕ್ ನಿರ್ಧರಿಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಹಿತಿಗಾಗಿ ಕೃಷಿ ವಿವಿ ಆಡಳಿತ ಮಂಡಳಿಯನ್ನ ಫಸ್ಟ್ ನ್ಯೂಸ್ ಸಂಪರ್ಕ ಮಾಡಿದ್ರೆ, ಸಂಪರ್ಕಕ್ಕೆ ಲಭ್ಯವಾಗಿಲ್ಲ.