ಚೌಕಿದಾರ್​ ಮೋದಿ 100 ಪರ್ಸೆಂಟ್​ ಚೋರ್: ರಾಹುಲ್ ಗಾಂಧಿ

ಕೋಲಾರ: ಬಿಜೆಪಿ ನೇತೃತ್ವದ ಮೋದಿ ಸರ್ಕಾರ ದೇಶದಲ್ಲಿ  ಬರೋಬ್ಬರಿ 30 ಸಾವಿರ ಕೋಟಿ ಕಳ್ಳತನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಅವರು ನೂರಕ್ಕೆ ನೂರರಷ್ಟು ಚೌಕಿದಾರ್​ ಚೋರ್​ (ಕಾವಲುಗಾರ ಕಳ್ಳ) ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಮೆಹುಲ್​​ ಚೋಕ್ಸಿ, ನೀರವ್ ಮೋದಿ, ಲಲಿತ್ ಮೋದಿ, ವಿಜಯ್​ ಮಲ್ಯಾ ಅಂಥವರಿಗೆ ಕಳ್ಳತನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದ್ರಂತೆ ಮೋದಿ ಅನ್ನೋರೆಲ್ಲಾ ಕಳ್ಳರೇ ಅಂತಾ ವಗ್ದಾಳಿ ನಡೆಸಿದರು.

ದೇಶವನ್ನ ಒಟ್ಟುಗೂಡಿಸುವ ಬದಲಾಗಿ ಪ್ರಧಾನಿ ಮೋದಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. 2014ರಲ್ಲಿ ಈ ದೇಶದ ಮುಂದೆ ಎರಡು ಮೂರು ವಿಚಾರಗಳನ್ನ ಇಟ್ಟು ವೋಟ್ ಕೇಳಿದ್ದರು. ₹2 ಕೋಟಿ ಹಣವನ್ನ ವಾಪಸ್ ತರುತ್ತೇನೆ. ಉದ್ಯೋಗ ಸೃಷ್ಟಿಸುತ್ತೇನೆ. ಕಪ್ಪು ಹಣ ತಂದು ದೇಶದ ಜನರ ಖಾತೆಗೆ 15 ಲಕ್ಷ ಹಣ ಜಮಾ ಮಾಡುತ್ತೇನೆ ಎಂದಿದ್ದರು. ಚುನಾವಣೆ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ₹15 ಲಕ್ಷ ಹಣ ಹಾಕ್ತೀವಿ ಅಂತಾ ಹೇಳಿದ್ದು ಕೇವಲ ಎಲೆಕ್ಷನ್​ಗಾಗಿ. ಇದು ಮೋದಿ ಸರ್ಕಾರದ ಭರವಸೆ ಅಂತಾ ವಗ್ದಾಳಿ ನಡೆಸಿದರು.

ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮೋದಿ ಅವರ ಮಾತನ್ನ ನೀವು ಕೇಳಿರಬಹುದು, ನಿರುದ್ಯೋಗದ ಬಗ್ಗೆ ಮಾತನಾಡುತ್ತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲೂ ಉದ್ಯೋಗ ನೀಡುವ ಬಗ್ಗೆ ಹೇಳುತ್ತಿಲ್ಲ. ಚೌಕಿದಾರ್ ಅಂತಾ ಹೇಳೋರು ಸುಳ್ಳು ಹೇಳಿ ದೇಶಕ್ಕೆ ಮೋಸ ಮಾಡಿದರು ಎಂದು ಹರಿಹಾಯ್ದರು.

ಕಾಂಗ್ರೆಸ್​ ಪಕ್ಷ ದೇಶದ ಬಡ ಜನರಿಗೆ ದುಡ್ಡು ನೀಡಲಿದೆ. ನಿಜವಾದ ಬಡವರಿಗೆ ಹಣ ನೀಡುವ ಸಲುವಾಗಿ ಚಿಂತಕರ ಸಭೆ ನಡೆಸಿದೆ. ಸಭೆ ಬಳಿಕ ದೇಶದಲ್ಲಿರುವ ಕಡು ಬಡವರಿಗೆ ₹72 ಸಾವಿರ ಹಾಗೂ 5 ವರ್ಷಕ್ಕೆ ಬರೋಬ್ಬರಿ ₹3.5 ಲಕ್ಷ ರೂಪಾಯಿ ನೀಡಲು ತೀರ್ಮಾನಿಸಿದೆ. ತಿಂಗಳಿಗೆ 6 ಸಾವಿರ, ವರ್ಷಕ್ಕೆ ₹72 ಸಾವಿರ ಐದು ವರ್ಷಕ್ಕೆ ₹3.5 ಲಕ್ಷ ಹಾಕಲು ಸಾಧ್ಯವಿದೆ ಅನ್ನೋದನ್ನ ಕಾಂಗ್ರೆಸ್​ ಅರಿತುಕೊಂಡಿದೆ ಅಂತಾ ಹೇಳಿದರು. ಅಲ್ಲದೇ ನಾವು ನೀಡುವ ಎಲ್ಲಾ ಹಣ ಬಡಕುಟುಂಬದ ಮಹಿಳೆಯರ ಖಾತೆಗೆ ಹೋಗಲಿದೆ ಎಂದರು.