ಪ್ರಧಾನಿ ಮೋದಿ ಒಬ್ಬ ಭ್ರಷ್ಟಾಚಾರಿ, ರಾಹುಲ್ ಗಾಂಧಿ ಆರೋಪ

ನವದೆಹಲಿ: ಪಂಚ ರಾಜ್ಯಗಳು ಹಾಗೂ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ರಾಜಕೀಯ ಮೊಗಸಾಲೆಯಲ್ಲಿ ಸಂಚಲನ ಸೃಷ್ಟಿಸಿದೆ. ವಿಪಕ್ಷ ಕಾಂಗ್ರೆಸ್ ಈ ವಿಷಯವನ್ನಿಟ್ಟುಕೊಂಡು ಆಡಳಿತ ಪಕ್ಷ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ಇದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಇಂದು ದೆಹಲಿಯ ಕಾಂಗ್ರೆಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಮೋದಿ ದೇಶದ 30 ಸಾವಿರ ಕೋಟಿ ರೂಪಾಯಿ ಹಣ ಲೂಟಿ ಮಾಡಿ ಅನಿಲ್​ ಅಂಬಾನಿ ಜೇಬಿಗೆ ಹಾಕಿದ್ದಾರೆ. ನರೇಂದ್ರ ಮೋದಿ ಒಬ್ಬ ಭ್ರಷ್ಟಾಚಾರಿ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಅನಿಲ್‌ ಅಂಬಾನಿಯ ರಿಲಯನ್ಸ್‌ ಕಂಪನಿಗೆ ರಫೇಲ್‌ ಡೀಲ್​​ ನೀಡಲಾಗಿದ್ದ ಬಗ್ಗೆ ರಫೇಲ್‌ ನಿರ್ಮಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಫ್ರಾನ್ಸ್​ ಮಾಜಿ ಅಧ್ಯಕ್ಷ ರಫೇಲ್​​​​ ಡೀಲ್‌ ಬಗ್ಗೆ ನನಗೆ ಸಂಪೂರ್ಣ​ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ರಫೇಲ್‌ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ ಎಂದರು. ಅಲ್ಲದೇ ರಫೇಲ್​​ ಡೀಲ್​​ ವಿವಾದದ ಬಗ್ಗೆ ಮಾಧ್ಯಮಗಳನ್ನು ಸಹ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್​​ ತರಾತುರಿಯಲ್ಲಿ ಫ್ರಾನ್ಸ್​​ಗೆ ತೆರಳುವ ಅಗತ್ಯ ಏನಿತ್ತು? ಎಂದು ನಿರ್ಮಲಾ ಸೀತರಾಮನ್​​​​​ ನಿನ್ನೆ ಮೂರು ದಿನಗಳ ಭೇಟಿಗಾಗಿ ಫ್ರಾನ್ಸ್​ಗೆ ತೆರಳಿರುವುದರ ಕುರಿತು ಪ್ರಶ್ನಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv