ರಫೇಲ್​​ ಹೇಳಿಕೆ: ಸುಪ್ರೀಂಕೋರ್ಟ್​​ನಿಂದ ಮತ್ತೆ ರಾಹುಲ್​​ಗೆ ನೋಟಿಸ್​

ನವದೆಹಲಿ: ರಫೇಲ್​​ ಒಪ್ಪಂದ ಸಂಬಂಧ ತನ್ನ ಆದೇಶದ ಬಗ್ಗೆ ತಪ್ಪಾಗಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್​ ನೀಡಿದೆ. ಚೌಕಿದಾರ್​ ಚೋರ್​ ಹೇ ಎಂದು ಸುಪ್ರೀಂ ಕೋರ್ಟ್​ ಹೇಳಿದೆ ಎಂಬ ರಾಹುಲ್ ಹೇಳಿಕೆ ಹಿನ್ನೆಲೆ ಈ ಹಿಂದೆ ಕೋರ್ಟ್​ ವಿವರಣೆ ಕೇಳಿ ರಾಹುಲ್ ಗಾಂಧಿಗೆ ನೋಟಿಸ್​ ನೀಡಿತ್ತು. ಇದಕ್ಕೆ ನಿನ್ನೆ ರಾಹುಲ್ ಉನ್ನತ ನ್ಯಾಯಾಲಯಕ್ಕೆ ವಿವರಣೆ ನೀಡಿದ್ದರು. ಆದ್ರೆ ರಾಹುಲ್ ಗಾಂಧಿ ನೀಡಿದ ವಿವರಣೆ ತೃಪ್ತಿದಾಯಕವಾಗಿಲ್ಲ ಎಂದು ಹೇಳಿ ಇಂದು ನೋಟಿಸ್​ ನೀಡಿದೆ. ಏಪ್ರಿಲ್ 30ರಂದು ಮುಂದಿನ ವಿಚಾರಣೆ ನಡೆಯಲಿದೆ.

ಏನಿದು ಪ್ರಕರಣ?

ರಫೇಲ್​ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರೋ ಅರ್ಜಿದಾರರು, ಕಳ್ಳತನವಾದ ರಫೇಲ್ ದಾಖಲೆಗಳನ್ನು ಬಳಸಿಕೊಂಡು ಆರೋಪ ಮಾಡಿದ್ದಾರೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಕೋರ್ಟ್​ಗೆ ಹೇಳಿತ್ತು. ಈ ಕಳ್ಳತನವಾಗಿದೆ ಎನ್ನಲಾದ ದಾಖಲೆಗಳನ್ನ ಕೋರ್ಟ್​ನಲ್ಲಿ ಸಾಕ್ಷಿಯಾಗಿ ಬಳಸಲು ಸುಪ್ರೀಂ ಕೋರ್ಟ್​ ಇತ್ತೀಚೆಗೆ ಸಮ್ಮತಿ ನೀಡಿ ಆದೇಶ ಹೊರಡಿಸಿತ್ತು. ಸುಪ್ರೀಂ ಕೋರ್ಟ್​​ನ ಈ ಆದೇಶವನ್ನು ರಾಹುಲ್ ಗಾಂಧಿ ಸಾರ್ವಜನಿಕರ ಮುಂದೆ ಹಾಗೂ ಮಾಧ್ಯಮಗಳ ಮುಂದೆ ತಪ್ಪಾಗಿ ವಿವರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿ ಕೋರ್ಟ್​ ಮೆಟ್ಟಿಲೇರಿತ್ತು.

ರಫೇಲ್​​​ ಆದೇಶಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಅಮೇಥಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸುಪ್ರೀಂ ಕೊರ್ಟ್​​ಗೆ ನಾನು ಧನ್ಯವಾದ ಹೇಳುತ್ತೇನೆ. ಇಡೀ ದೇಶ ಚೌಕಿದಾರ್​ ಚೋರ್​​ ಹೈ ಎಂದು ಹೇಳುತ್ತಿದೆ. ಸುಪ್ರೀಂ ಕೋರ್ಟ್​ ಇಂದು ನ್ಯಾಯದ ಪರವಾಗಿ ಮಾತನಾಡಿದೆ. ಚೌಕಿದಾರ್​ ಕಳ್ಳತನ ಮಾಡಿದ್ದಾನೆ ಅಂತ ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ. ಇದು ಸೆಲೆಬ್ರೇಷನ್​​​ನ ದಿನ ಎಂದು ಹೇಳಿದ್ದರು. ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂ ಕೋರ್ಟ್​ ಹೇಳಿಕೆಯೆಂಬಂತೆ ಬಿಂಬಿಸಿದ್ದಾರೆ ಎಂದು ಬಿಜೆಪಿಯ ಮೀನಾಕ್ಷಿ ಲೇಖಿ ಕೋರ್ಟ್​​ ಮೆಟ್ಟಿಲೇರಿದ್ದರು.

ಈ ಹಿನ್ನೆಲೆ ಒಂದು ವಾರದೊಳಗೆ ವಿವರಣೆ ನೀಡುವಂತೆ ರಾಹುಲ್ ಗಾಂಧಿಗೆ ಕೋರ್ಟ್​ ಸೂಚಿಸಿತ್ತು. ನಿನ್ನೆ ರಾಹುಲ್ ಸ್ಪಷ್ಟನೆ  ಕೋರ್ಟ್​​ಗೆ ತನ್ನ ಹೇಳಿಕೆ ಸಲ್ಲಿಸಿದ್ದರು. ರಾಜಕೀಯ ಪ್ರಚಾರದ ಭರದಲ್ಲಿ ನಾನು ಆ ರೀತಿ ಹೇಳಿಕೆ ನೀಡಿದೆ, ಈ ಬಗ್ಗೆ ವಿಷಾದಿಸುತ್ತೇನೆ. ಅಲ್ಲದೇ ಈ ರೀತಿಯ ಯಾವುದೇ ಹೇಳಿಕೆಯನ್ನು ಸುಪ್ರೀಂಕೋರ್ಟ್ ಹೇಳಿದೆ ಅಂತಾ ನಾನು ಇನ್ನು ಮುಂದೆ  ಹೇಳುವುದಿಲ್ಲ ಅಂತಾ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್​ಗೆ ನಿನ್ನೆ ತಿಳಿಸಿದ್ದರು.

 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv