‘ಪ್ರಚಾರದ ಭರದಲ್ಲಿ ಹಾಗಂದೆ, ರಫೇಲ್​ ಹೇಳಿಕೆ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ರಾಹುಲ್ ವಿಷಾದ..!

ನವದೆಹಲಿ: ರಫೇಲ್​​ಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್​ ಆದೇಶವನ್ನು ಸಾರ್ವಜನಿಕರ ಮುಂದೆ ತಪ್ಪಾಗಿ ಅರ್ಥೈಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಸುಪ್ರೀಂ ಕೋರ್ಟ್​​ಗೆ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಪ್ರಚಾರದ ಭರದಲ್ಲಿ ನಾನು ಆ ರೀತಿ ಹೇಳಿಕೆ ನೀಡಿದೆ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ವಿಷಾದಿಸುತ್ತೇನೆ ಅಲ್ಲದೇ ಈ ರೀತಿಯ ಯಾವುದೇ ಹೇಳಿಕೆಯನ್ನು ಸುಪ್ರೀಂಕೋರ್ಟ್ ಹೇಳಿದೆ ಅಂತಾ ನಾನು ಇನ್ನು ಮುಂದೆ  ಹೇಳುವುದಿಲ್ಲ ಅಂತಾ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್​ಗೆ ತಿಳಿಸಿದ್ದಾರೆ.

ಏನಿದು ಪ್ರಕರಣ? 

ಕಳ್ಳತನವಾದ ರಫೇಲ್ ದಾಖಲೆಗಳನ್ನು ಅರ್ಜಿದಾರರು ಬಳಸಿಕೊಂಡಿದ್ದಾರೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಕೋರ್ಟ್​ಗೆ ಹೇಳಿತ್ತು. ಈ ದಾಖಲೆಗಳನ್ನ ಕೋರ್ಟ್​ನಲ್ಲಿ ಸಾಕ್ಷಿಯಾಗಿ ಬಳಸಲು ಸುಪ್ರೀಂ ಕೋರ್ಟ್​ ಇತ್ತೀಚೆಗೆ ಸಮ್ಮತಿ ನೀಡಿ ಆದೇಶ ಹೊರಡಿಸಿತ್ತು. ಸುಪ್ರೀಂ ಕೋರ್ಟ್​​ನ ಈ ಆದೇಶವನ್ನು ರಾಹುಲ್ ಗಾಂಧಿ ಸಾರ್ವಜನಿಕರ ಮುಂದೆ ಹಾಗೂ ಮಾಧ್ಯಮಗಳ ಮುಂದೆ ತಪ್ಪಾಗಿ ವಿವರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿ ಕೋರ್ಟ್​ ಮೆಟ್ಟಿಲೇರಿತ್ತು.

ರಫೇಲ್​​​ ಆದೇಶಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಅಮೇಥಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸುಪ್ರೀಂ ಕೊರ್ಟ್​​ಗೆ ನಾನು ಧನ್ಯವಾದ ಹೇಳುತ್ತೇನೆ. ಇಡೀ ದೇಶ ಚೌಕಿದಾರ್​ ಚೋರ್​​ ಹೈ ಎಂದು ಹೇಳುತ್ತಿದೆ. ಸುಪ್ರೀಂ ಕೋರ್ಟ್​ ಇಂದು ನ್ಯಾಯದ ಪರವಾಗಿ ಮಾತನಾಡಿದೆ. ಚೌಕಿದಾರ್​ ಕಳ್ಳತನ ಮಾಡಿದ್ದಾನೆ ಅಂತ ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ. ಇದು ಸೆಲೆಬ್ರೇಷನ್​​​ನ ದಿನ ಎಂದು ಹೇಳಿದ್ದರು. ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂ ಕೋರ್ಟ್​ ಹೇಳಿಕೆಯೆಂಬಂತೆ ಬಿಂಬಿಸಿದ್ದಾರೆ ಎಂದು ಬಿಜೆಪಿಯ ಮೀನಾಕ್ಷಿ ಲೇಖಿ ಕೋರ್ಟ್​​ ಮೆಟ್ಟಿಲೇರಿದ್ದರು.

ಈ ಹಿನ್ನೆಲೆ ಒಂದು ವಾರದೊಳಗೆ ವಿವರಣೆ ನೀಡುವಂತೆ ರಾಹುಲ್ ಗಾಂಧಿಗೆ ಕೋರ್ಟ್​ ಸೂಚಿಸಿತ್ತು. ಇದೀಗ ರಾಹುಲ್ ಸ್ಪಷ್ಟನೆ ನೀಡಿದ್ದು, ನಾಳೆ ವಿಚಾರಣೆ ಮುಂದುವರೆಯಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv