ಗುಜರಾತ್​ನಲ್ಲಿ ₹15 ಲಕ್ಷ ಖರ್ಚಾಗೋ ಶಿಕ್ಷಣ, ಇಲ್ಲಿ ಉಚಿತ-ರಾಹುಲ್ ಗಾಂಧಿ

ಹಾವೇರಿ: ಕರ್ನಾಟಕದಲ್ಲಿ ಶಿಶು ವಿಹಾರದಿಂದ ಹಿಡಿದು ಸ್ನಾತಕೋತ್ತರ ಹಂತದ ವರೆಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅದೇ ಗುಜರಾತಿನಲ್ಲಿ ಒಬ್ಬ ಹೆಣ್ಣು ಮಗಳು ಶಿಕ್ಷಣ ಕಲಿಬೇಕು ಅಂದರೆ 15 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

ಶಿಗ್ಗಾಂವ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕರ್ನಾಟಕಕ್ಕೆ ನರೇಂದ್ರ ಮೋದಿ ವಿಚಾರವನ್ನು ಮಾತನಾಡಲು ಬಂದಿದ್ದೇನೆ. ಈ ರಾಜ್ಯವನ್ನು ಮುನ್ನಡೆಸೋಕೆ ಬಿಜೆಪಿಗೆ ಸಾಧ್ಯವಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ. ಇವರು ನೀಡೋ ಯಾವುದೇ ಭರವಸೆಗಳನ್ನು ಈಡೇರಿಸುವುದಿಲ್ಲ. ಬಿಜೆಪಿಗರು ಬಸವಣ್ಣವರು ಹೇಳಿದಂತೆ ನುಡಿದಂತೆ ನಡೆಯುವುದಿಲ್ಲ. ಬಸವಣ್ಣನವರ ವಚನಗಳು ದೇಶ ವಿದೇಶಗಳಲ್ಲಿ ಪ್ರಚಲಿತದಲ್ಲಿವೆ. ಆದರೆ, ದೇಶದಲ್ಲಿ ಮೋದಿ ಆ ವಿಚಾರಧಾರೆಗಳಂತೆ ನಡೆಯುತ್ತಿಲ್ಲ. ಅವರ ವಚನಗಳನ್ನು ಪಾಲಿಸುತ್ತಿಲ್ಲ ಎಂದು ಕುಟುಕಿದರು.

ಲೋಕಸಭಾ ಚುನಾವಣೆ ವೇಳೆ 15 ಲಕ್ಷ ಹಣವನ್ನು ಬಡವರ ಖಾತೆಗೆ ಹಾಕುತ್ತೇನೆ ಅಂತಾ ಹೇಳಿದ್ದ ಮೋದಿಯವರು ನುಡಿದಂತೆ ನಡೆಯಲಿಲ್ಲ. ಇನ್ನು ಭ್ರಷ್ಟಾಚಾರದ ಬಗ್ಗೆ ಮಾತಾನಾಡುತ್ತಾರೆ. ಅವರ ಪಕ್ಕದಲ್ಲಿ ಯಡಿಯೂರಪ್ಪ ಇರುತ್ತಾರೆ. ಯಡಿಯೂರಪ್ಪ ಸೇರಿದಂತೆ ಐದು ಜನ ಮಂತ್ರಿಗಳು ಜೈಲಿಗೆ ಹೋಗಿ ಬಂದಿದ್ದಾರೆ.
ಮೋದಿ ಹಗಲು ದರೋಡೆ ಮಾಡುತ್ತಿದ್ದಾರೆ.

ಗಬ್ಬರ್ ಸಿಂಗ್ ರಾತ್ರಿ ಬಂದು ದರೋಡೆ ಮಾಡಿ ಹೋಗುತ್ತಿದ್ದ. ಆದರೆ ಮೋದಿ ಹಗಲು ದರೋಡೆ ಮಾಡುತ್ತಿದ್ದಾರೆ. ಗಬ್ಬರ್​ ಸಿಂಗ್ ಟ್ಯಾಕ್ಸ್ ಬಡವರ ಮೇಲೆ ಹಾಕಿದ್ದಾರೆ. ಮೋದಿಯವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡಿ ಅಂತಾ ಕೇಳಿಕೊಂಡೆ. ಆದರೆ, ಅವರು ಸ್ಪಂದಿಸಲಿಲ್ಲ. ಅದೇ ಸಿದ್ದರಾಮಯ್ಯನವರಿಗೆ ಪೋನ್ ಮಾಡಿ ಬಡ ರೈತರ ಸಾಲ ಮನ್ನಾ ಮಾಡಲು ಆಗುತ್ತಾ ಎಂದು ಕೇಳಿಕೊಂಡೆ. ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಿದರು. ಬಂಡವಾಳ ಶಾಹಿಗಳ ಎರಡೂವರೆ ಲಕ್ಷ ಕೋಟಿ ಸಾಲ ಮನ್ನಾ ಮಾಡೋ ಮೋದಿಯವರು, ಬಡ ರೈತರ ಸಾಲವನ್ನು ಏಕೆ ಮನ್ನ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv