‘ದಿ ವಾಲ್’​ ಖ್ಯಾತಿಯ ದ್ರಾವಿಡ್​ಗೆ ಇಂದು ಜನ್ಮ ದಿನದ ಸಂಭ್ರಮ..!

ಭಾರತ ಕ್ರಿಕೆಟ್​ ತಂಡದ ಮಾಜಿ ಬ್ಯಾಟ್ಸ್​​ಮನ್​ ದಿ ವಾಲ್​ ಖ್ಯಾತಿಯ ರಾಹುಲ್​​​ ದ್ರಾವಿಡ್​ಗೆ ಇಂದು ಜನ್ಮ ದಿನದ ಸಂಭ್ರಮ. ಸುಮಾರು ಒಂದುವರೆ ದಶಕಗಳ ಕಾಲ ಕ್ರಿಕೆಟ್​ ಅಂಗಳದಲ್ಲಿ ಮಿಂಚಿದ್ದ ದ್ರಾವಿಡ್​, 46 ವಸಂತಗಳನ್ನ ಪೂರೈಸಿದ್ದಾರೆ. ಸದ್ಯ ಭಾರತ ಅಂಡರ್​​-19 ಮತ್ತು ‘ಎ’ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ, ಭವಿಷ್ಯದ ಟೀಮ್​ ಇಂಡಿಯಾ ಕಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. 1996ರ ಏಫ್ರಿಲ್​​ 3ರಂದು ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದ ದ್ರಾವಿಡ್​, ಅದೇ ವರ್ಷ ಜೂನ್​ 20 ರಂದು ಆರಂಭವಾದ ಇಂಗ್ಲೆಂಡ್​ ವಿರುದ್ಧದ ಲಾರ್ಡ್ಸ್​​ ಟೆಸ್ಟ್​ನಲ್ಲಿ ಭಾಗವಹಿಸುವ ಮೂಲಕ ಟೆಸ್ಟ್​ ಜಗತ್ತಿಗೆ ಎಂಟ್ರಿ ನೀಡಿದ್ರು. ಅಷ್ಟೇ ಅಲ್ಲದೇ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ 95 ರನ್​ ಗಳಿಸಿ ಗಮನ ಸೇಳೆದಿದ್ರು. ಮುಂದೆ ಸುಮಾರು ಒಂದುವರೆ ದಶಕಗಳ ಕಾಲ ಭಾರತ ಕ್ರಿಕೆಟ್​ ತಂಡದ ಬ್ಯಾಟಿಂಗ್​ ಬೆನ್ನೆಲುಬಾಗಿದ್ದ ದ್ರಾವಿಡ್​, ದಿ ವಾಲ್​ ಎಂದೇ ಫೇಮಸ್​ ಆದ್ರು. ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಕ್ರಮವಾಗಿ 13288 ಮತ್ತು 10889 ರನ್​ ಗಳಿಸಿದ ದ್ರಾವಿಡ್​, ಕ್ರಿಕೆಟ್​ನ ಎರಡೂ ಮಾದರಿಯಲ್ಲಿ 10 ಸಾವಿರಕ್ಕೂ ಅಧಿಕ ರನ್​ ಕಲೆಹಾಕಿದ ಕೆಲವೇ ಕೆಲವು ಬ್ಯಾಟ್ಸ್​​ಮನ್​ಗಳಲ್ಲಿ ಒಬ್ಬರಾಗಿದ್ದಾರೆ. 2012 ರಲ್ಲಿ ದ್ರಾವಿಡ್​ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್​ನಲ್ಲಿ ಅಂತಿಮ ಟೆಸ್ಟ್​ ಪಂದ್ಯವನ್ನಾಡಿದ್ದರು. ಸದ್ಯ ಕಿರಿಯ ತಂಡದ ಕೋಚ್​ ಆಗಿರುವ ದ್ರಾವಿಡ್​, 2018ರ ಅಂಡರ್​-19 ವಿಶ್ವಕಪ್​ ಗೆಲ್ಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.