ಫಸ್ಟ್‌ ಸೀನ್‌ಗೆ ನಾನು 25 ಟೇಕ್ ತಗೊಂಡೆ..!

ಸ್ಯಾಂಡಲ್‌ವುಡ್‌ನ ತಮ್ಮ ಸಿನಿಪಯಣಕ್ಕೆ ಸುದೀರ್ಘ 10 ವರ್ಷಗಳು ತುಂಬಿದ ಖುಷಿಯಲ್ಲಿರೋ ನಟಿ ರಾಗಿಣಿ ಫಸ್ಟ್‌ ನ್ಯೂಸ್‌ ನೊಂದಿಗೆ ತಮ್ಮ ಸಿನಿಜೀವನದ ಅನುಭವ, ಸಿಹಿಕಹಿ ನೆನಪುಗಳ ಮೆಲುಕು ಹಾಕಿದ್ರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಹೀರೋಯಿನ್‌ ಆಗಿ ವೀರಮದಕರಿ ಚಿತ್ರದ ಮೂಲಕ ರಾಗಿಣಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ರು. 2008ರಲ್ಲಿ ತೆರೆಕಂಡ ಚಿತ್ರ ಸೂಪರ್‌ ಹಿಟ್ ಆಗಿದ್ದಷ್ಟೇ ಅಲ್ಲ. ರಾಗಿಣಿನ ತೆರೆಮೇಲೆ ನೋಡಿ ಕನ್ನಡ ಪ್ರೇಕ್ಷಕರು ಕನ್ನಡಕ್ಕೊಬ್ರು ಒಳ್ಳೇ ಹೈಟ್ ಇರೋ ಸೂಪರ್ ಹೀರೋಯಿನ್ ಸಿಕ್ರು ಅಂತಾ ಖುಷಿ ಪಟ್ರು. ಮೂಲತಃ ಪಂಜಾಬಿಯಾದ ರಾಗಿಣಿ ಚಿತ್ರರಂಗಕ್ಕೆ ಬಂದಾಗ ಹೊಸಬರು. ಹೀಗಾಗೇ ಫಸ್ಟ್ ಟೈಂ ಮದಕರಿ ಚಿತ್ರದಲ್ಲಿನ ತಮ್ಮ ಮೊದಲ ಎಂಟ್ರಿ ಸೀನ್‌ಗೆ ಇವ್ರು ತಗೊಂಡ ಟೇಕ್ಸ್ 25. ಹೀಗಂತಾ ಅವರೇ ನೆನಪು ಮಾಡಿಕೊಂಡು ಮುಗುಳ್ನಕ್ರು.

ನಾನು ಬ್ಲ್ಯಾಂಕ್ ಆಗ್ಬಿಟ್ಟಿದೆ.!
‘ವೀರಮದಕರಿ ಚಿತ್ರ ತುಂಬಾ ಅರ್ಜೆಂಟಾಗಿ ಶೂಟಿಂಗ್ ಶುರುವಾಗಿಬಿಡ್ತು. ಸುದೀಪ್ ಸರ್ ಆಫೀಸ್ ಹೋಗಿ ಎಲ್ಲಾ ಸೆಟ್ ಆಗಿ 3 ದಿನದೊಳಗೆ ಶೂಟಿಂಗ್ ಶುರುವಾಯ್ತು. ನಂಗೆ ಆ್ಯಕ್ಟಿಂಗ್ ಗೊತ್ತಿಲ್ಲ, ಶೂಟಿಂಗ್ ಹೇಗಿರುತ್ತೆ ಗೊತ್ತಿಲ್ಲ. ಸೌತ್ ಫಿಲ್ಮ್ ಇಂಡಸ್ಟ್ರಿ ಬಗ್ಗೇನು ಗೊತ್ತೇ ಇರಲಿಲ್ಲ. ಮದಕರಿ ಚಿತ್ರದಲ್ಲಿ ನನ್ನ ಮೊದಲ ಡೈಲಾಗ್ ಇದೆ. ನನ್ನ ಹೆಸರು ನೀರಜಾ ಗೋಸ್ವಾಮಿ ಅಂತಾ ಹೇಳಬೇಕು. ಇದೊಂದು ಲೈನ್‌ ಹೇಳೋಕೆ ಅದೆಷ್ಟು ಕಷ್ಟ ಆಯ್ತು ಅಂದ್ರೆ 25 ಟೇಕ್ ತಗೊಂಡೆ. ಲೈಫ್‌ನಲ್ಲಿ ಫಸ್ಟ್‌ ಟೈಂ ಲಂಗ ದಾವಣಿ ಹಾಕ್ಕೊಂಡಿದ್ದೆ. ಎದುರಿಗೆ ಕ್ಯಾಮೆರಾ ಇದೆ. ಹಾಗೇ ಸುದೀಪ್‌ ಅಂತಾ ಸೂಪರ್‌ ಸ್ಟಾರ್ ನಿಂತಿದ್ದಾರೆ. ಶೂಟಿಂಗ್ ನಡೀತಿದೆ. ನನ್ನ ಡೈಲಾಗ್ ಬರ್ತಿದ್ದಂಗೆ ಬಾಯೇ ಕಟ್ಟಿಹೋಯ್ತು. ಬ್ಲ್ಯಾಂಕ್ ಆಗ್ಬಿಟ್ಟೆ.. ಏನ್ಮಾಡದು ಅಂತಾನೇ ಗೊತ್ತಾಗಲಿಲ್ಲ. ನಿಜವಾಗ್ಲೂ ಅಷ್ಟು ಈಸಿಯಲ್ಲ ಕ್ಯಾಮೆರಾ ಫೇಸ್ ಮಾಡೋದು’ ಅಂತಾರೆ ರಾಗಿಣಿ.