ನಾನು ಪತ್ನಿಗಿಂತ ಮುನ್ನ ಒಬ್ಬ ಮಹಿಳೆ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು: ಮಯೂರಿ

#MeToo ಅಭಿಯಾನದ ಏಳು ಹೆಡೆ ಸರ್ಪ ಘಟಾನುಘಟಿಗಳನ್ನು ಸುತ್ತಿಕೊಳ್ತಿದೆ. ಅದಕ್ಕೆ ಹಾಲಿವುಡ್, ಬಾಲಿವುಡ್, ಸ್ಯಾಂಡಲ್​ವುಡ್, ಕಾಲಿವುಡ್​​​, ರಾಜಕೀಯ, ಕ್ರೀಡೆ, ಸಾಹಿತ್ಯ, ಸಂಗೀತ ಹೀಗೆ ಪ್ರತಿಯೊಂದು ಕ್ಷೇತ್ರದ ಸಾಧಕರು, ಘಟಾನುಘಟಿಗಳು ಹೊರತಾಗಿಲ್ಲ. ಇದೇ #MeToo ಸರ್ಪ ಇದೀಗ ಕನ್ನಡದ ರಾಷ್ಟ್ರೀಯ ಖ್ಯಾತಿಯ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧವೂ ಭುಸ್​​ಗುಡುತ್ತಿದೆ. ಅವರ ವಿರುದ್ಧವೂ ತಮಿಳಿನ ಖ್ಯಾತ ಗಾಯಕಿ ಚಿನ್ಮಯೀ ಶ್ರೀಪಾದ್ ಗಾಯಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಮಾಡಿದ್ದು, ಅದಕ್ಕೆ ರಘು ದೀಕ್ಷಿತ್ ಪ್ರತ್ಯುತ್ತರ ನೀಡಿದ್ದೂ ಗೊತ್ತೇ ಇದೆ. ಈಗ ಈ ವಿವಾದಕ್ಕೆ ಸಂಬಂಧಿಸಿದಂತೆ ಗಾಯಕ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯಾಯ ಟ್ವೀಟ್​ ಮಾಡಿದ್ದು, #MeToo  ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲ, ತಪ್ಪಿತಸ್ಥರು ಯಾರೇ ಆಗಿದ್ರೂ ಕಾನೂನಾತ್ಮಕ ರೀತಿಯಲ್ಲಿ ಶಿಕ್ಷೆ ಆಗಲೇ ಬೇಕು ಅಂತಾ ಆಗ್ರಹಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್​​ನಲ್ಲಿ ಸರಣಿ ಟ್ವೀಟ್ ಮಾಡಿರೋ ಮಯೂರಿ, ಇಲ್ಲಿ ನನ್ನ ಮದುವೆ ಮತ್ತು ಡೈವೋರ್ಸ್​ ವಿಚಾರ ಅಪ್ರಸ್ತುತ. ನಾನು ಪತ್ನಿಯಾಗುವುದಕ್ಕಿಂತ ಮುಂಚೆ ಮಹಿಳೆ. ಅವರು ಸೆಲೆಬ್ರಿಟಿ ಇರಲಿ ಅಥವಾ ಇಲ್ಲದೇ ಇರಲಿ ಪ್ರತಿಯೊಬ್ಬರ ಡಿಗ್ನಿಟಿ ಅತ್ಯಂತ ಮುಖ್ಯ. ಈ ಘಟನೆಯ ಸತ್ಯಾಸತ್ಯತೆ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ, ಒಬ್ಬ ಮಹಿಳೆ ಹೊರ ಬಂದು ಈ ರೀತಿ ಆರೋಪ ಮಾಡಲು ಅತ್ಯಂತ ಧೈರ್ಯ ಬೇಕು ಅಂತಾ ಅವರು ಹೇಳಿದ್ದಾರೆ.