‘ಯುವಜನತೆಯ ಬೇಡಿಕೆ ಈಡೇರಿಸಿದ ಪ್ರಧಾನಿ ಮೋದಿಗೆ ನಾವು ಕೃತಜ್ಞರಾಗಿರಬೇಕು’ -ಅಮಿತ್​ ಶಾ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಯುವ ಜನತೆ ಅನೇಕ ವರ್ಷಗಳಿಂದ ಮುಂದಿಡುತ್ತಿದ್ದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಇದೊಂದು ಚರಿತ್ರಾರ್ಹ ಹೆಜ್ಜೆಯಾಗಿದೆ. ಮನ ತಾಕುವಂತಹ ಈ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಕೃತಜ್ಞರಾಗಿರಬೇಕು. ಪಕ್ಷದ ಕಾರ್ಯಕರ್ತರ ಪರವಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಹೇಳಿದ್ದಾರೆ.
ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಉದ್ಘಾಟನಾ ಭಾಷಣ ಮಾಡಿದ ಅಮಿತ್​ ಶಾ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇ. 10ರಷ್ಟು ಜನರಲ್​ ಕೋಟಾ ಮಸೂದೆ ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು. ಅಲ್ಲದೇ, ಇಡೀ ವಿಶ್ವದಲ್ಲಿ ಪ್ರಧಾನಿ ಮೋದಿಯಷ್ಟು  ಜನಪ್ರಿಯ ನಾಯಕ ಮತ್ತೊಬ್ಬರಿಲ್ಲ ಎಂದು ಹೇಳಿದರು.

ಹೊಸ ಜಿಎಸ್​​ಟಿ ನೀತಿಯಿಂದ ಲಕ್ಷಾಂತರ ವ್ಯಾಪಾರಿಗಳಿಗೆ ಲಾಭ
ಇದೇ ವೇಳೆ ಜಿಎಸ್​​ಟಿ ತೆರಿಗೆ ನೀತಿಯನ್ನು ಪ್ರಸ್ತಾಪಿಸಿದ ಅಮಿತ್​ ಶಾ, ಈ ವಾರದಲ್ಲಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 1.5 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ವ್ಯಾಪಾರಿಗಳು ಹೊಸ ಕಾಂಪೊಸಿಷನ್​​ ಯೋಜನೆಯ ಅನುಸಾರ ಕೇವಲ ಶೇ. 1 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಲಕ್ಷಾಂತರ ವ್ಯಾಪಾರಿಗಳು ಮತ್ತು ಉದ್ದಿಮೆದಾರರು ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.

ಇನ್ನು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ 12 ಸಾವಿರ ಜನ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಅಬ್​ ಕಿ ಬಾರ್ ಫಿರ್​ ಮೋದಿ ಸರ್ಕಾರ್ ಅನ್ನೋ ಹೊಸ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿಯಲು ಬಿಜೆಪಿ ಸಜ್ಜಾಗಿದೆ. ಕಾರ್ಯಕಾರಿಣಿಯಲ್ಲಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದನ್ನ ಚರ್ಚಿಸಲಿದೆ.