ಭಾರೀ ಮಳೆಯಿಂದಾದ ಹಾನಿಯನ್ನು ಶೀಘ್ರವೇ ಸರಿಪಡಿಸುತ್ತೇವೆ: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ

ಬೆಂಗಳೂರು: ಭಾರೀ ಮಳೆಯಿಂದ ರಸ್ತೆಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್‌.ಡಿ. ರೇವಣ್ಣ ನೇತೃತ್ವದಲ್ಲಿ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಸಭೆ ನಡೆಯಿತು. ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಕರಾವಳಿ, ಮಲೆನಾಡು, ಉಡುಪಿ, ಕೊಡುಗು ಸೇರಿದಂತೆ ಒಟ್ಟು ಆರು ಜಿಲ್ಲೆಗಳ ಶಾಸಕರ ಸಭೆ ಮಾಡಿದ್ದೇವೆ. ಕೆಲವು ಭಾಗಗಳಲ್ಲಿ ಅತೀ ಹೆಚ್ಚು ಮಳೆಯಿಂದ ರಸ್ತೆಗಳು, ಸೇತುವೆಗಳು ಹಾಳಾಗಿವೆ. ಕೂಡಲೇ ಅವುಗಳನ್ನು ಸರಿಪಡಿಸೋ ಕೆಲಸ ಮಾಡ್ತಿದ್ದೇವೆ ಎಂದರು.

ಇನ್ನು, ಮಂಗಳೂರರಿಗೆ ಯು.ಟಿ ಖಾದರ್ ಅವರನ್ನು ನೇಮಕ ಮಾಡಿದ್ದೇವೆ. ಅವರು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಿದ್ದಾರೆ. ರಸ್ತೆಗಳ ದುರಸ್ಥಿಗೆ ಹೆಚ್ಚು ಅನುದಾನ ಕೊಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಶಿರಾಡಿ ಘಾಟ್​ನ್ನು 16ನೇ ತಾರೀಖಿನೊಳಗೆ ಓಪನ್ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.

ಇನ್ನು ಸಭೆ ಬಳಿಕ ಬಿಜೆಪಿ ಶಾಸಕ ಸಿಟಿ ರವಿ ಮಾತನಾಡಿ, ಅತಿ ಮಳೆಯಿಂದ ರಸ್ತೆಗಳೆಲ್ಲಾ ಹಾಳಾಗಿವೆ. ವಿಶೇಷ ಅನುದಾನಗಳನ್ನು ಘೋಷಣೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಒತ್ತಾಯ ಮಾಡಿದ್ದೇವೆ. ಮಲೆನಾಡು, ಕರಾವಳಿಯಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು ಎಂದರು. ಪ್ರವಾಸೋದ್ಯಮ ಕೇಂದ್ರಗಳಿಗೆ ಕನೆಕ್ಟ್ ಮಾಡುವ ಟೂರಿಸಂ ಸರ್ಕ್ಯೂಟ್ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ, ಸೆಂಟ್ರಲ್ ರೋಡ್ ಸ್ಕೀಂನಲ್ಲಿ ಅನುದಾನ ಕೊಟ್ಟಿದೆ. ಆದರೆ ಟೆಂಡರ್ ಕರೆದು ರಸ್ತೆ ಕಾಮಗಾರಿ ಮಾಡೋ ಕೆಲಸ ಆಗಿಲ್ಲ. ಒಂದೊಂದು ಕ್ಷೇತ್ರದಲ್ಲಿ ₹ 30ರಿಂದ ₹ 50ಕೋಟಿ ಬಿಲ್ ಪೆಂಡಿಂಗ್ ಇವೆ. ಪೆಂಡಿಂಗ್ ಬಿಲ್​ಗಳನ್ನ ಕೊಡಬೇಕು ಅಂತ ಒತ್ತಾಯ ಮಾಡಿದ್ದೇವೆ. ಮೃತ ಜಾನುವಾರುಗಳಿಗೆ ಕನಿಷ್ಠ ₹ 5 ಸಾವಿರದಿಂದ ಗರಿಷ್ಠ ಒಂದು ಲಕ್ಷವರೆಗೆ ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

ಸಭೆಯಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳ ಶಾಸಕರು ಸೇರಿದಂತೆ ಕಂದಾಯ ಸಚಿವ ಆರ್. ವಿ.ದೇಶಪಾಂಡೆ ಮತ್ತು ವಸತಿ ಸಚಿವ ಯು.ಟಿ‌.ಖಾದರ್ ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv