ಬಜೆಟ್ ಮೇಲಿನ ಉತ್ತರಕ್ಕೂ ಮುಹೂರ್ತ ನೋಡಿದ ಸಚಿವ ಹೆಚ್.ಡಿ‌.ರೇವಣ್ಣ

ಬೆಂಗಳೂರು: ವಿಧಾನಸಭೆಯ ಇಂದಿನ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಬಜೆಟ್ ಮೇಲೆ ಸದನದಲ್ಲಿ ಉತ್ತರಿಸಬೇಕಿತ್ತು. ಇಂದು ಬೆಳಿಗ್ಗೆ 10.30ರಿಂದ ಕಲಾಪ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಸಿಎಂ ಉತ್ತರ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇಂದು ಗುರುವಾರ, ನಾಳೆ ಅಮಾವಾಸ್ಯೆ. ಹೀಗಾಗಿ ಬಜೆಟ್ ಒಪ್ಪಿಗೆಗೆ ಸದನದಲ್ಲಿ ಮತ ಹಾಕಲು ಮುಂದಾದ್ರೆ ಏನು ಮಾಡುವುದೆಂದು ಯೋಚಿಸಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ ಕೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು, ಸಲಹಾ ಸಮಿತಿ ಸಭೆ ಸೇರಿ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ. ಅಲ್ಲದೇ, ಇಂದು ಸದನದಲ್ಲಿ ಮಧ್ಯಾಹ್ನ 3.00 ಗಂಟೆಯ ಬಳಿಕ ಸಿಎಂ ಉತ್ತರಕ್ಕೆ ಸಮಯ ನಿಗದಿಯಾಗಿದೆ. ವಿಧಾನಸಭೆಯ ಸಭಾಧ್ಯಕ್ಷ ರಮೇಶ್ ಕುಮಾರ್ ಈಗಾಗಲೇ ಸಿಎಂ ಉತ್ತರ ಮಧ್ಯಾಹ್ನ 3 ಗಂಟೆಯ ಬಳಿಕ ಎಂದು ಸದನಕ್ಕೆ ತಿಳಿಸಿದ್ದಾರೆ. ಹೀಗಾಗಿ ಮಧ್ಯಾಹ್ನದ ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಬಜೆಟ್ ಮೇಲೆ ಸಿಎಂ ಕುಮಾರಸ್ವಾಮಿ ಉತ್ತರ ಕೊಡಲಿದ್ದಾರೆ.

ಜ್ಯೋತಿಷಿಗಳು ಹೇಳಿದ್ದೇನು..?
ಇಂದು ಗುರುವಾರ ಆಗಿರುವುದರಿಂದ ರಾಹುಕಾಲ 1.30 ರಿಂದ 3.00 ಗಂಟೆಯವರೆಗೂ ಇರುತ್ತೆ. ರಾಹುಕಾಲದಲ್ಲಿ ಬಜೆಟ್ ಮೇಲೆ ಒಪ್ಪಿಗೆ ಸಿಗುವುದು ಕಷ್ಟ. ಜೊತೆಗೆ ಬಜೆಟ್ ಮೇಲೆ ಉತ್ತರ ಕೊಡುವುದೂ ಸೂಕ್ತವಲ್ಲ. ರಾಹುಕಾಲ ಮುಗಿಸಿ ಬಳಿಕ ಬಜೆಟ್ ಮೇಲೆ ಉತ್ತರಿಸಲಿ ಎಂದು ಜ್ಯೋತಿಷಿಗಳು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ, ಮಧ್ಯಾಹ್ನ 3.00 ಗಂಟೆಯ ಬಳಿಕ ಬಜೆಟ್ ಮೇಲೆ ಉತ್ತರ ಕೊಡಲಿ, ಒಳ್ಳೆಯದಾಗುತ್ತೆ ಎಂದು ಜ್ಯೋತಿಷಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv