ಸುಮಲತಾ ಸ್ಪರ್ಧೆ: ನನಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದ ಪುನೀತ್​..!

ಮಂಡ್ಯ ರಾಜಕಾರಣ ರಾಜ್ಯದ ಗಮನ ಸೆಳೆದಿದೆ. ಒಂದೆಡೆ ರಾಜಕಾರಣ ಮತ್ತೊಂದೆಡೆ ಸಿನಿಮಾ ರಂಗ ಒಟ್ಟೊಟ್ಟಿಗೆ ಸಾಗುತ್ತಿವೆ. ಅಂಬರೀಶ್​​​ರ ಪತ್ನಿ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಚಿತ್ರರಂಗದ ಹಲವರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಸ್ಟಾರ್​ ನಟರ ಹೆಸರೂ ತಳುಕು ಹಾಕಿಕೊಂಡಿದೆ. ಈ ಮಧ್ಯೆ, ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ.

ಇಬ್ಬರೂ ನಮ್ಮ ಹಿತೈಷಿಗಳೇ..!
ಪುನೀತ್​ ತಮ್ಮ ಟ್ವೀಟ್​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.. ‘ಎಲ್ಲರಿಗೂ ನನ್ನ ನಮಸ್ಕಾರ.. ನನಗೂ, ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ. ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲ್ಲಲ್ಲ.

ನಾನು ಹೇಳ ಬಯಸುವ ವಿಚಾರವೇನೆಂದರೆ ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಹಾಗೂ ಅವರ ಆಯ್ಕೆಗೆ ಸಂಬಂಧ ಪಟ್ಟಿದ್ದು. ಅದನ್ನು ಈ ದೇಶದ ಹಾಗೂ ಈ ನಾಡಿನ ನಾಗರಿಕನಾಗಿ ನಾನು ಗೌರವಿಸುತ್ತೇನೆ. ಕನ್ನಡ ಜನತೆಗೆ ಹಾಗೂ ನಮ್ಮ ಅಭಿಮಾನಿಗಳಿಗೆ ಅವರ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದು ಕೇಳಿಕೊಂಡಿದ್ದೇನೆಯೇ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಎಂದಿಗೂ ಸೂಚಿಸಿರುವುದಿಲ್ಲ.

ಗೌರವಾನ್ವಿತ ದೇವೇಗೌಡರು ಹಾಗೂ ಅಂಬರೀಶ್ ಅವರ ಕುಟುಂಬವು ನಮ್ಮ ಕುಟುಂಬದ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ, ಇಬ್ಬರಿಗೂ ಒಳ್ಳೆಯದಾಗಲಿ. ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತಾ… ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ.. ನಿಮ್ಮ ಮತ, ನಿಮ್ಮ ಆಯ್ಕೆ’ ಅಂತಾ ಪುನೀತ್​ ಟ್ವೀಟ್ ಮಾಡಿದ್ದಾರೆ.