‘ಭರತ ಬಾಹುಬಲಿ’ ಆಗಲಿದ್ದಾರೆ ಶಿವಣ್ಣ- ಪುನೀತ್​..!

ಶಿವಣ್ಣ- ಪುನೀತ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನೋಡಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಸೆ. ದಶಕದಿಂದಲೂ ಇಂಥದ್ದೊಂದು ಬೇಡಿಕೆ ಗಾಂಧಿನಗರವನ್ನು ಕಾಡುತ್ತಿದೆ. ಇಬ್ಬರೂ ಒಟ್ಟಿಗೆ ನಟಿಸ್ತಾರೆ ಅಂತಾ ಆಗಿಂದಾಗೆ ಸುದ್ದಿಯಾದ್ರೂ, ಅಷ್ಟೇ ವೇಗದಲ್ಲಿ ಮರೆಯಾಗುತ್ತಿತ್ತು. ಆದ್ರೀಗ ಒಟ್ಟಿಗೆ ನಟಿಸುವ ಎಲ್ಲಾ ಸೂಚನೆ ಸಿಕ್ಕಿದೆ. ಪೌರಾಣಿಕ ಕಥೆಯೊಂದರಲ್ಲಿ ಇಬ್ಬರೂ ಜೊತೆಯಾಗುವ ಸಮಯ ಹತ್ತಿರದಲ್ಲಿದೆ.
‘ಭರತ ಬಾಹುಬಲಿ’ಯಲ್ಲಿ ಸಹೋದರರು..!
ಶಿವಣ್ಣ- ಪುನೀತ್​ ಒಟ್ಟಿಗೆ ನಟಿಸಬೇಕು ಅನ್ನೋದು ಮೊದಲಿನಿಂದಲೂ ರಾಜ್​ ಕುಟುಂಬದ ಆಸೆಯಾಗಿತ್ತು. ಆದ್ರಲ್ಲೂ ಪಾರ್ವತಮ್ಮ ರಾಜ್​ಕುಮಾರ್​ ಮಕ್ಕಳನ್ನು ಜೊತೆಯಾಗಿ ನೋಡಬೇಕು ಅಂತಾ ಕನಸು ಕಂಡಿದ್ದರು. ಆದರೆ ಇಲ್ಲಿ ತನಕ ಸಾಧ್ಯವಾಗಿರಲಿಲ್ಲ. ಇದೀಗ ‘ಭರತ ಬಾಹುಬಲಿ’ ಅನ್ನೋ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತಾ ಸುದ್ದಿಯಾಗಿದೆ. ಅಸಲಿಗೆ ಇದೊಂದು ಪೌರಾಣಿಕ ಕಥೆಯಾಗಿದ್ದು, ಇಬ್ಬರೂ ನಟಿಸೋಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ‘ಮಾಸ್ಟರ್​ಪೀಸ್’ ನಿರ್ದೇಶಕ ಮಂಜು ಮಾಂಡವ್ಯ ‘ಭರತ ಬಾಹುಬಲಿ’ ಅಂತಾ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಏನಾದರೂ ಶಿವಣ್ಣ- ಪುನೀತ್​ ಅಭಿನಯಿಸಲಿದ್ದಾರಾ ಅನ್ನೋ ಸಂದೇಹವೂ ಇದೆ. ಈ ಸಿನಿಮಾದಲ್ಲಿ ಭರತ-ಬಾಹುಬಲಿ ಪಾತ್ರಗಳೂ ಬಂದು ಹೋಗಲಿವೆ. ಈ ಪಾತ್ರಗಳಲ್ಲೇ ಇಬ್ಬರೂ ನಟಿಸ್ತಿದ್ದಾರಾ..? ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.  ಇದೇನಾದರೂ ನಿಜವಾದಲ್ಲಿ ಶಿವಣ್ಣ- ಅಪ್ಪು ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರೇಷನ್​ ಅನ್ನೋದ್ರಲ್ಲಿ ಡೌಟೇ ಇಲ್ಲ.