ಪುಣೆಯಲ್ಲಿ ಅಪ್ಪ, ಮಗಳ ಬ್ಯಾಂಕ್​ ಖಾತೆಗೆ ಆನ್​ಲೈನ್ ಕನ್ನ..!

ಪುಣೆ: ಆನ್​ಲೈನ್​ನಲ್ಲಿ ಐಟಮ್ ಬುಕ್ ಮಾಡಿ ಮೋಸ ಹೋಗಿರೋರು ಇದಾರೆ. ಇದೇ ರೀತಿ ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮುಂತಾದ ಆರ್ಥಿಕ ವ್ಯವಹಾರಗಳನ್ನ ಮಾಡಿ ಮೋಸ ಹೋದೋರೂ ಇದಾರೆ. ಆದ್ರೆ, ಇ-ಕಾಮರ್ಸ್ ಸೈಟ್​ನಲ್ಲಿ ಯಾವುದೋ ಬೇಕಾದ ವಸ್ತುವನ್ನ ಬುಕ್ ಮಾಡಿ, ಅದರ ಕ್ವಾಲಿಟಿ ಸರಿಯಿಲ್ಲ ಅಂತ ರೀಫಂಡ್​ಗೆ ಅಪ್ಲೈ ಮಾಡಿ ಮೋಸ ಹೋದವರ ಬಗ್ಗೆ ಕೇಳಿದ್ದೀರಾ..? ಅಂಥದ್ದೊಂದು ಘಟನೆ ಭಾರತದಲ್ಲೇ ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ತಂದೆ ಹಾಗೂ ಮಗಳಿಗೆ ಖದೀಮರು ಬರೋಬ್ಬರಿ 82 ಸಾವಿರ ಉಂಡೆ ನಾಮ ತಿಕ್ಕಿದ್ದಾರೆ. ಅದೂ ಜಸ್ಟ್ 107 ರೂಪಾಯಿ ರೀಫಂಡ್ ನೀಡೋದಕ್ಕಾಗಿ. ನವೆಂಬರ್ 2018ರಲ್ಲಿ ಮಹಿಳೆ 107 ರೂಪಾಯಿಗೆ ಉಂಗುರವೊಂದನ್ನ ಆರ್ಡರ್ ಮಾಡಿದ್ರು. ಆದ್ರೆ ಅದು ಸರಿಹೊಂದುತ್ತಿಲ್ಲ ಅಂತ ವಾಪಸ್ ನೀಡಿ, ಹಣ ರೀಫಂಡ್ ಮಾಡಲು ಕೇಳಿದ್ದಾರೆ. ರೀಫಂಡ್ ಬರೋದು ತಡವಾಗಿದೆ. ಹೀಗಾಗಿ ಆಕೆ ಕಸ್ಟಮರ್ ಕೇರ್​ಗೆ ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ಕಸ್ಟಮರ್ ಕೇರ್​ನ ವ್ಯಕ್ತಿ, ಆಕೆ ಬಳಿ ಕಾರ್ಡ್​ನ ಮಾಹಿತಿಯನ್ನೆಲ್ಲಾ ಪಡೆದಿದ್ದಾನೆ. ಮಹಿಳೆ 3 ಬಾರಿಗೆ ತನಗೆ ಬಂದ ಒಟಿಪಿಯನ್ನೂ ಕೊಟ್ಟಿದ್ದಾರೆ. ಕಿಲಾಡಿ ಖದೀಮ, ಮಹಿಳೆಯ ಅಕೌಂಟ್​ನಿಂದ 1,600 ರೂಪಾಯಿ ಡ್ರಾ ಮಾಡಿದ್ದಾನೆ. ಇದರ ಬಗ್ಗೆ ಆನ್​ಲೈನ್​ನಲ್ಲಿ ಕಂಪ್ಲೆಂಟ್ ಮಾಡಿದ ಮಹಿಳೆಯನ್ನ ಮತ್ತೊಬ್ಬ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಸಂಪರ್ಕಿಸಿದ್ದಾನೆ. ಆಗಲೂ ಕಾರ್ಡ್ ಡಿಟೇಲ್ಸ್ ಕೊಡುವಂತೆ ಕೇಳಿದ್ದು, ಮಹಿಳೆ ತನ್ನ ತಂದೆಯ ಕಾರ್ಡ್ ಮಾಹಿತಿಯನ್ನ ನೀಡಿದ್ದಾರೆ. ಅದರಿಂದ 20 ಸಾವಿರ ಒಮ್ಮೆ ಹಾಗೂ ಎರಡನೇ ಬಾರಿ 60 ಸಾವಿರ ರೂಪಾಯಿ ಡ್ರಾ ಮಾಡಿದ್ದಾನೆ. 1 ದಿನ ಬಿಟ್ಟು, ಅಕೌಂಟ್​ನಲ್ಲಿ ಉಳಿದಿದ್ದ 181 ರೂಪಾಯಿಯನ್ನೂ ಖದೀಮ ಡ್ರಾ ಮಾಡಿದ್ದಾನೆ.

ತಂದೆ ಹಾಗೂ ಮಗಳ ಅಕೌಂಟ್​ನಿಂದ ಮುಂಬೈ ಹಾಗೂ ದೆಹಲಿಯ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನ ಬಂಧಿಸಿರುವ ಪುಣೆ ಪೊಲೀಸರು ಐಪಿಸಿ ಸೆಕ್ಷನ್ 419, 420 ಹಾಗೂ ಕೆಲವು ಆದಾಯ ತೆರಿಗೆ ಕಾಯ್ದೆಗಳಡಿ ಕೇಸ್ ದಾಖಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv