ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್​​​ಶಿಪ್​ನಲ್ಲಿ ಚಿನ್ನದ ಸಾಧನೆ ಮಾಡಿದ ಚೈತ್ರ

ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡ್ತಿದೆ. 1500 ಮೀಟರ್ ರೇಸ್​ನಲ್ಲಿ ಪಿ.ಯು. ಚೈತ್ರ, ಚಿನ್ನದ ಸಾಧನೆ ಮಾಡಿದ್ದಾರೆ. 2017ರಲ್ಲಿ ನಡೆದ ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲೂ ಚೈತ್ರ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಇದಲ್ಲದೆ, ಪುರುಷರ 1500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋಜ್ ಬೆಳ್ಳಿ ಹಾಗೂ ಮಹಿಳೆಯರ ವಿಭಾಗದ 200 ಮೀಟರ್ ಓಟದಲ್ಲಿ ಧುತಿ ಚಾಂದ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

3 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನ ಗೆದ್ದಿರುವ ಭಾರತ ಏಷಿಯನ್ ಚಾಂಪಿಯನ್​ಶಿಪ್ ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಹ್ರೇನ್ 11 ಚಿನ್ನದೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ರೆ 10 ಚಿನ್ನದ ಪದಕಗಳನ್ನ ಗಳಿಸಿರುವ ಚೀನಾ ಎರಡನೇ ಸ್ಥಾನದಲ್ಲಿದೆ. 1983ರಿಂದ ಇಲ್ಲಿವರೆಗೂ ಚೀನಾ ಎರಡನೇ ಬಾರಿಗೆ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 2017ರಲ್ಲಿ ಭಾರತ ಚೀನಾಕ್ಕಿಂತಲೂ ಹೆಚ್ಚಿನ ಚಿನ್ನದ ಪದಕಗಳನ್ನ ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತಳ್ಳಿತ್ತು. ಇದಾದ ಬಳಿಕ ಸದ್ಯ ಬಹ್ರೇನ್, ಚೀನಾವನ್ನ ಹಿಂದಿಕ್ಕಿದೆ. ಗಾಯದ ಸಮಸ್ಯೆಯಿಂದಾಗಿ ಹಲವು ಸ್ಟಾರ್ ಪ್ಲೇಯರ್ಸ್ ಹಾಗೂ ಪದಕ ಗೆಲ್ಲುವ ನಿರೀಕ್ಷೆ ಇದ್ದ ಆಟಗಾರರು ಈ ಬಾರಿಯ ಚಾಂಪಿಯನ್ ಶಿಪ್​ನಲ್ಲಿ ಭಾಗಿಯಾಗಿರಲಿಲ್ಲ. ಆದರೂ ಸಹ ಭಾರತ ಉತ್ತಮ ಸಾಧನೆ ಮಾಡಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.