ಲೇ ಔಟ್ ಕಡ್ಡಾಯ ನಿಯಮ ಸರಳೀಕರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಶಿರಸಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇ-ಖಾತೆ ಹಾಗೂ ಲೇ ಔಟ್​ನ ಕಡ್ಡಾಯ ನಿಯಮಗಳನ್ನು ಸರಳೀಕರಿಸುವಂತೆ ಆಗ್ರಹಿಸಿ ಕಾರ್ಮಿಕರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಶನ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಾದ್ಯಂತ ಇ-ಖಾತಾ ಸಮಸ್ಯೆಯಿಂದ ಶೇ.80ರಷ್ಟು ಆಸ್ತಿ ಅಕ್ರಮ ಪಟ್ಟಿಗೆ ಸೇರಿದೆ. ಸಾರ್ವಜನಿಕರ ಆಸ್ತಿಗಳು ಇದ್ದೂ ಇಲ್ಲದಂತಾಗಿದೆ. ಜನ ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಆಗದೆ, ಇತ್ತ ಮನೆಯನ್ನು ಕಟ್ಟಿಕೊಳ್ಳಲು ಆಗದೇ ಆಸ್ತಿ ಹಕ್ಕು ಕಳೆದುಕೊಂಡಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಿರಸಿ ನಗರವೊಂದರಲ್ಲೇ ಇರುವ 17 ಸಾವಿರ ಆಸ್ತಿಯಲ್ಲಿ 13 ಸಾವಿರ ಆಸ್ತಿ ಅಕ್ರಮದ ಪಟ್ಟಿಗೆ ಸೇರಿದೆ. 1976 ರ ನಂತರದ ನಿವೇಶನ ಲೇ ಔಟ್ ಆಗದಿದ್ದರೆ ಅಕ್ರಮ ಎಂದು ಘೋಷಿಸಲು ಸರ್ಕಾರ ನಿಯಮ ರೂಪಿಸಿರುವುದು ತೀವ್ರ ಸಮಸ್ಯೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಇ-ಖಾತಾ ಹಾಗೂ ಲೇ ಔಟ್ ನಿಯಮ ಸರಳೀಕರಣಗೊಳಿಸಬೇಕು ಅಥವಾ ರದ್ಧುಪಡಿಸಬೇಕು. ಕಂದಾಯ ಇಲಾಖೆಯಲ್ಲೇ ಸ್ಥಿರಾಸ್ತಿಗಳ ದಾಖಲೆ ನಮೂದಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ಖಾತಾ ಸಮಸ್ಯೆ ಬಗೆಹರಿಸಬೇಕು ಇಲ್ಲವಾದರೆ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಬೇಕು. ಕಟ್ಟಡದ ಪರವಾನಗಿ ನಿಯಮ ಸರಳೀಕರಣ ಮಾಡಿ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಉಳಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv