ಎತ್ತಿನ ಬಂಡಿಯಲ್ಲಿ ಮರಳು ಸಾಗಿಸಿದ ಶಾಸಕ ರೇಣುಕಾಚಾರ್ಯ!

ದಾವಣಗೆರೆ: ಮರಳು ನೀಡುವಂತೆ ಆಗ್ರಹಿಸಿ ಹೊನ್ನಾಳಿ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಭಟನೆಯಲ್ಲಿ ಭಾಗಿಯಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬರಬೇಕೆಂದು ಆಗ್ರಹಿಸಿದರು.
ಹೊನ್ನಾಳಿಯಲ್ಲಿ ಪ್ರತಿಭಟನಾಕಾರರು ಮರಳು ತುಂಬಲು ನದಿಗೆ ಎತ್ತಿನ ಬಂಡಿಯಲ್ಲಿ ಹೊರಟರು. ಈ ವೇಳೆ ಡಿಸಿ ಮತ್ತು ಎಸ್ಪಿ ಇಲ್ಲಿಗೆ ಬರಬೇಕು. ನಮಗೂ ಕಾನೂನು ಕಾಪಾಡುವುದು ಗೊತ್ತಿದೆ ಎಂದು ಡಿವೈಎಸ್ಪಿಗೆ ಅವಾಜ್​ ಹಾಕಿದರು. ಜನರಿಗೆ ಮುಕ್ತವಾಗಿ ಮರಳು ವಿತರಿಸಲು ತುಂಗಭಧ್ರಾ ನದಿಗೆ ಇಳಿದು ಶಾಸಕ ರೇಣುಕಾಚಾರ್ಯ ಮರಳು ತುಂಬಿದ್ದಾರೆ. ಎತ್ತಿನ ಬಂಡಿಯಲ್ಲಿ ಬೆಂಬಲಿಗರೊಂದಿಗೆ ರೇಣುಕಾಚಾರ್ಯ ನದಿಯಿಂದ ಮರಳನ್ನು ಕ್ಷೇತ್ರದ ಜನರಿಗಾಗಿ ಹೊತ್ತೊಯ್ದಿದ್ದಾರೆ.