ಶ್ಯಾಮನೂರುಗೆ ಸಚಿವ ಸ್ಥಾನ ಕೊಡಿ.. ಇಲ್ಲವೇ ದಾವಣಗೆರೆ ಮರೆತು ಬಿಡಿ!

ಬೆಂಗಳೂರು: ಶ್ಯಾಮನೂರು ಶಿವಶಂಕರಪ್ಪನವರಿಗೆ ಸಚಿವ ಸ್ಥಾನ ಕೊಡಿ. ಇಲ್ಲವೇ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನ ಮರೆತು ಬಿಡಿ ಎಂದು ಶ್ಯಾಮನೂರು ಶಿವಶಂಕರಪ್ಪ ಬೆಂಬಲಿಗರು ಡಿಸಿಎಂ ಪರಮೇಶ್ವರ್​ಗೆ ಎಚ್ಚರಿಕೆ ನೀಡಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ಕೊಡಲೇ ಬೇಕು. ಇಲ್ಲವಾದಲ್ಲಿ ಬರುವ ಲೋಕಸಭಾ ‌ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಕಾಂಗ್ರೆಸ್​ಗೆ ಕಷ್ಟವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದಲ್ಲಿರುವ ಡಿಸಿಎಂ ಡಾ.ಜಿ ಪರಮೇಶ್ವರ್ ‌ನಿವಾಸದ ಎದುರು ಪ್ರತಿಭಟನೆ ನಡೆಸಿದ ಬೆಂಬಲಿಗರು, ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಡಿಸಿಎಂ ಪರಮೇಶ್ವರ್​ ಅವರ ಜೊತೆ ಮಾತನಾಡಿದ ಬೆಂಬಲಿಗರು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ತಪ್ಪಿದೆ. ಆದರೆ ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೊಡುವಂತೆ ಡಾ.ಜಿ ಪರಮೇಶ್ವರ್‌ಗೆ ಮನವಿ ಮಾಡಿದರು. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಸ್ಥಳೀಯ ನಗರ ಪಾಲಿಕೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಬೆಂಬಲಿಗರ ಮನವಿಯನ್ನು ಸ್ವೀಕರಿಸಿದ ಡಿಸಿಎಂ ಪರಮೇಶ್ವರ್, ‘ಆಯ್ತು ಬಿಡ್ರಪ್ಪ, ಶ್ಯಾಮನೂರು ಶಿವಶಂಕರಪ್ಪನವರನ್ನು ಸಚಿವರನ್ನಾಗಿ ಮಾಡೋಣ’ ಎಂದು ಭರವಸೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv