ಆಸ್ತಿ ವಿಚಾರಕ್ಕೆ ತಂದೆಯನ್ನೇ ಥಳಿಸಿದ ಪಾಪಿ ಮಕ್ಕಳು..!

ದಾವಣಗೆರೆ: ಆಸ್ತಿ ವಿಚಾರವಾಗಿ ಮೂವರು ಮಕ್ಕಳು, ತಮ್ಮ ತಂದೆ ಹಾಗೂ ಇಬ್ಬರು ಸಹೋದರನ್ನ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ಧ ಬಸಪ್ಪ, ಅವರ ಮಕ್ಕಳಾದ ಬೀರೇಶ್ ಹಾಗೂ ಗಜೇಂದ್ರ ಹಲ್ಲೆಗೊಳಗಾದವರು. ವೃದ್ಧ ಬಸಪ್ಪನಿಗೆ ಐದು ಜನ ಗಂಡು ಮಕ್ಕಳಿದ್ದರು. ಅವರು ಪ್ರತಿಯೊಬ್ಬ ಮಗನಿಗೂ ಒಂದು ಮುಕ್ಕಾಲು ಎಕರೆ ಜಮೀನು ಹಂಚಿದ್ರಂತೆ. ಆದ್ರೆ ಇಂದು ಬಸಪ್ಪ ಅವರು ತಮ್ಮ ಭಾಗಕ್ಕೆ ಬಂದಿದ್ದ ಜಮೀನಿನಲ್ಲಿ, ಮಕ್ಕಳಾದ ಬೀರೇಶ್ ಹಾಗೂ ಗಜೇಂದ್ರ ಅವರೊಂದಿಗೆ ಜಮೀನು ಉಳುಮೆ ಮಾಡಲು ಹೋಗಿದ್ದರಂತೆ. ಈ ವೇಳೆ ವೃದ್ಧ ತಂದೆ ಹಾಗೂ ಸಹೋದರರ ಮೇಲೆ ಬಸಪ್ಪನವರ ಉಳಿದ ಮೂವರು ಮಕ್ಕಳಾದ ಕುಮಾರ್, ಚಂದ್ರಾ, ಸಿದ್ದೇಶ್  ಮೂವರು ಸೇರಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದ ತಂದೆ, ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನೆ ಕುರಿತು  ಹಲ್ಲೆಗೊಳಗಾದವರು, ವೀಡಿಯೋ ಸಮೇತ, ಹಲ್ಲೆ ಮಾಡಿದವರ ಮೇಲೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ರಂತೆ. ಆದ್ರೆ ನ್ಯಾಮತಿ ಠಾಣಾ ಪೊಲೀಸರು ದೂರು ಪಡೆಯದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಹಲ್ಲೆ ಗೊಳಗಾದವರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರಂತೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv