‘ಉತ್ತರ’ದ ನಿರೀಕ್ಷೆಯಲ್ಲಿ ಬರ್ತಿದ್ದಾರೆ ಪ್ರಿಯಾಂಕಾ ಗಾಂಧಿ..!

ಉತ್ತರ ಪ್ರದೇಶ: ಮುಂಬರುವ 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಭರ್ಜರಿ ತಯಾರಿ ನಡೆಸಿದೆ. ಇಷ್ಟುದಿನ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮೂಲಕ ಚುನಾವಣಾ ಪ್ರಚಾರ ಕಾರ್ಯ ಹಾಗೂ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವ ರಣತಂತ್ರಕ್ಕೆ ಕಾಂಗ್ರೆಸ್​ ಪಾಳಯ ಮುಂದಾಗಿತ್ತು. ಆದರೆ ಪ್ರಧಾನಿ ಮೋದಿಯ ಅಲೆ ಮುಂದೆ ರಾಹುಲ್​ ರಣತಂತ್ರ ವರ್ಕೌಟ್​ ಆಗುತ್ತೋ ಇಲ್ಲವೋ ಅನ್ನೋ ಅನುಮಾನ ಹೆಚ್ಚಾದ ಬೆನ್ನಲ್ಲೇ ಮೋದಿಗೆ ಟಕ್ಕರ್​ ನೀಡಲು ಹೊಸ ಅಸ್ತ್ರವೊಂದನ್ನು ಕೈ ನಾಯಕರು ಹೂಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಅಖಾಡಕ್ಕೆ ಇಳಿಸುತ್ತಿದ್ದು, ಉತ್ತರಪ್ರದೇಶದ ಜವಾಬ್ದಾರಿ ನೀಡಲಾಗಿದೆ. ಸದ್ಯ ಪ್ರಿಯಾಂಕಾಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡೋ ಮೂಲಕ ಕೈ ನಾಯಕರು ಹೊಸ ಗೇಮ್​ ಪ್ಲಾನ್​ ರೂಪಿಸಿದ್ದಾರೆ.
ಉತ್ತರಪ್ರದೇಶದ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಮೊದಲ ಬಾರಿಗೆ ಯುಪಿಗೆ ಭೇಟಿ ನೀಡಲಿದ್ದಾರೆ. ಜ್ಯೋತಿರಾದಿತ್ಯ ಸಿಂಧ್ಯ ಜೊತೆ ಇಂದು ಲಕ್ನೌಗೆ ಆಗಮಿಸಲಿದ್ದು, ಪಕ್ಷದ ಸಂಘಟನೆಯಲ್ಲಿ ಹಾಗೂ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲೇ ತಮ್ಮ ರಣತಂತ್ರದ ಸ್ಯಾಂಪಲ್ ತೋರಿಸಿದ್ದಾರೆ ಪ್ರಿಯಾಂಕಾ ಗಾಂಧಿ.
ನಿನ್ನೆ ದೆಹಲಿಯಲ್ಲಿ ಮಾತನಾಡಿರುವ ಪ್ರಿಯಾಂಕ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಂದೇಶವೊಂದದನ್ನ ರವಾನಿಸಿದ್ದಾರೆ. ನಾವೆಲ್ಲಾ ಒಂದಾಗಿ ಬಡವರು, ಯುವ ಜನತೆ ಸೇರಿದಂತೆ ಎಲ್ಲರನ್ನೂ ಒಳಗೊಂಡ ಹೊಸ ರಾಜಕೀಯ ವ್ಯವಸ್ಥೆಗೆ ನಾಂದಿ ಹಾಡೋಣ ಅಂತ ಪ್ರಿಯಾಂಕಾ ಸಂದೇಶ ನೀಡಿದ್ದಾರೆ. ಕಾಂಗ್ರೆಸ್​ನ ಶಕ್ತಿ ಌಪ್​ನಲ್ಲಿ ಸಂದೇಶ ನೀಡಿರುವ ಪ್ರಿಯಾಂಕಾ, ನಿಮ್ಮೆಲ್ಲರನ್ನ ಭೇಟಿಯಾಗಲು ನಾನು ಲಕ್ನೌಗೆ ಬರುತ್ತಿದ್ದೇನೆ. ನಾವೆಲ್ಲಾ ಒಟ್ಟಾಗಿ ಸೇರಿ ಹೊಸ ರಾಜಕೀಯ ಶುರು ಮಾಡೋಣ, ಇದರಲ್ಲಿ ನೀವೆಲ್ಲಾ ಭಾಗಿಯಾಗಿರುತ್ತೀರಿ. ನನ್ನ ಯುವ ಮಿತ್ರರು, ನನ್ನ ಸೋದರಿಯರು, ಅತ್ಯಂತ ದುರ್ಬಲರು, ಬಡವರು ಎಲ್ಲರ ಮಾತನ್ನೂ ಕೇಳುತ್ತೇನೆ. ನನ್ನ ಜೊತೆ ಹೊಸ ರಾಜಕೀಯ, ಹೊಸ ಭವಿಷ್ಯ ರೂಪಿಸಲು ಬನ್ನಿ ಅಂತ ಪ್ರಿಯಾಂಕಾ ಸಂದೇಶ ರವಾನಿಸಿದ್ದಾರೆ.
ರಾಹುಲ್ ಗಾಂಧಿ ಕೂಡ ಪ್ರಿಯಾಂಕಾಗೆ ಸಾಥ್ ನೀಡಲಿದ್ದು, ಏರ್​ಪೋರ್ಟ್​​ನಿಂದ ಪಕ್ಷದ ಕಚೇರಿಗೆ ಱಲಿ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್​ನ ಅಧಿಕೃತ ಚಾಲನೆ ಅಂತಲೂ ಹೇಳಲಾಗ್ತಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv