ಹೈ-ಕ ಪ್ರಾಧಿಕಾರ ಚುಕ್ಕಾಣಿ ಮೇಲೆ ಕಣ್ಣಿಟ್ಟ ಖರ್ಗೆ ಕುಟುಂಬ

ಬೆಂಗಳೂರು: ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಕೈತಪ್ಪಿ ಹೋಗಬಾರದೆಂದು ಖರ್ಗೆ ಕುಟುಂಬ ನಿಗಾವಹಿಸುತ್ತಿದೆ. ಕೇಂದ್ರ ಸರ್ಕಾರದಿಂದ ಪ್ರತಿ ವರ್ಷವೂ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 1,500 ಕೋಟಿ ವಿಶೇಷ ಅನುದಾನ ಕಲಂ 371(J) ಅಡಿಯಲ್ಲಿ ಹರಿದು ಬರುತ್ತಿದ್ದು, ಈ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನಮ್ಮ ಕೈವಶವಾಗಲೇಬೇಕೆಂದು ಖರ್ಗೆ ಕುಟುಂಬ ಲಾಬಿ ಶುರು ಮಾಡಿದೆ. ಪ್ರತಿ ವರ್ಷ ₹ 1,500 ಕೋಟಿಯಂತೆ 5 ವರ್ಷದಲ್ಲಿ ಸರಿಯಾಗಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಅಂದ್ರೆ 7,500 ಕೋಟಿ ರೂಪಾಯಿಗಳು ಈ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರದ ವತಿಯಿಂದ ಹರಿದುಬರಲಿದೆ. ನೀರಾವರಿ, ಶಿಕ್ಷಣ, ರಸ್ತೆ, ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವಿಶೇಷ ಅನುದಾನ ನೀಡಲಿದೆ. ಹೀಗಾಗಿ ಈ ಪ್ರಾಧಿಕಾರದ ಅಧ್ಯಕ್ಷ ಗಾದಿಗೆ ಭಾರೀ ಬೇಡಿಕೆಯಿದೆ.

ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ, ಇದೇ ಭಾಗದ ಸಚಿವರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ವಾಡಿಕೆ. 2013 ರಿಂದ 2018 ರವರೆಗಿನ 5 ವರ್ಷದ ಸಿದ್ಧರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಶರಣಪ್ರಕಾಶ ಪಾಟೀಲ್‌ರನ್ನ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಬಾರಿ ಹೈದರಾಬಾದ್-ಕರ್ನಾಟಕ ಭಾಗದಿಂದ ನಾಲ್ವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ಪುತ್ರ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ನಿಗಮ ಅಧ್ಯಕ್ಷರಾಗಬೇಕು ಎಂದು ತೆರೆಮರೆಯಲ್ಲಿ ಲಾಬಿ ಶುರುವಾಗಿದೆ.

ಪ್ರಾಧಿಕಾರದ ಅಧ್ಯಕ್ಷರಾಗ್ತಾರಾ ಪ್ರಿಯಾಂಕ್ ಖರ್ಗೆ?
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಬೇಕು ಅಂದ್ರೆ, ಅವರು ಇದೇ ಭಾಗದ ಚುನಾಯಿತ ಪ್ರತಿನಿಧಿಯಾಗಬೇಕು. ಇನ್ನು ಕೇಂದ್ರ ಸರ್ಕಾರದಿಂದ ಕಲಂ 371(J) ಅಡಿಯಲ್ಲಿ ಬರುವ ವಿಶೇಷ ಅನುದಾನವನ್ನು 5 ಜಿಲ್ಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟು ಶ್ರಮವಹಿಸಿ ಕೆಲಸ ಮಾಡುವವರಾಗಿರಬೇಕು. ಬೀದರ್, ರಾಯಚೂರು, ಕಲ್ಬುರ್ಗಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವವರಾಗಿರಬೇಕು. ಹೀಗಾಗಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ವಾಡಿಕೆಯಾಗಿದೆ. ಅದ್ರೆ ಈ ಬಾರಿ ರಾಜ್ಯ ರಾಜಕೀಯದಲ್ಲಿ ಕೊಂಚ ಬದಲಾವಣೆಯಾಗಿದ್ದು, ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಡಳಿತ ನಡೆಸುತ್ತಿದೆ. ಹೀಗಾಗಿ ನಿಗಮ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನವನ್ನು ಸಚಿವರಿಗೆ ನೀಡುವುದರ ಬದಲು ಶಾಸಕರನ್ನು ಪರಿಗಣಿಸಿ ಎಂಬ ಕೂಗು ಕೇಳಿ ಬರುತ್ತಿದೆ.

ಸಚಿವರಲ್ಲದೇ ಶಾಸಕರನ್ನು ಪ್ರಾಧಿಕಾರದ ನೇಮಕಕ್ಕೆ ಪರಿಗಣಿಸಿ
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೇ ಭಾಗದ ನಾಲ್ವರು ಸಚಿವರು ರೇಸ್‌ನಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ್ ಹುಮ್ನಾಬಾದ್, ಬಂಡೆಪ್ಪ ಕಾಶೆಂಪೂರ್ ಮತ್ತು ವೆಂಕಟರಾವ್ ನಾಡಗೌಡ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನಮಗೆ ಬರಲೀ ಎಂದು ತೆರೆಮರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ. ಇತ್ತ ಸಚಿವ ಪ್ರಿಯಾಂಕ್ ಖರ್ಗೆ ಪರ, ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಮುಂದೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದಾರೆ. ಇನ್ನೊಂದು ಕಡೆ ದೊಡ್ಡ ಮಟ್ಟದಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೇವಲ ಸಚಿವರೇ ಏಕೆ? ಶಾಸಕರನ್ನು ಪರಿಗಣಿಸಿ ಎಂಬ ಕೂಗೂ ಕೇಳಿ ಬಂದಿದೆ. ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್, ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತೆ ಎಂಬ ಆಸೆ ಇಟ್ಟುಕೊಂಡಿದ್ರು. ಅದ್ರೆ ಕೊನೆಗಳಿಗೆಯಲ್ಲಿ ಅಜಯ್ ಸಿಂಗ್ ಗೆ ಸಚಿವ ಸ್ಥಾನ ಕೈತಪ್ಪಿದೆ. ಎರಡನೇ ಬಾರಿ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ಆಯ್ಕೆಯಾಗಿರುವ ಅಜಯ್ ಸಿಂಗ್ ಕೂಡ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿ ನೀಡಿ ಎನ್ನುತ್ತಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷ ಗಾದಿಗೆ ಅಜಯ್ ಸಿಂಗ್ v/s ಪ್ರಿಯಾಂಕ್ ಖರ್ಗೆ
ಇತ್ತ ಸಚಿವರಾದ ರಾಜಶೇಖರ ಪಾಟೀಲ್ ಹುಮ್ನಾಬಾದ್ ಮತ್ತು ವೆಂಕಟರಾವ್ ನಾಡಗೌಡ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ರೆ, ಪ್ರಿಯಾಂಕ್ ಖರ್ಗೆ, ಬಂಡೆಪ್ಪ ಕಾಶೆಂಪೂರ್ ಎರಡನೇ ಬಾರಿ ಸಚಿವರಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಪರ ಮಲ್ಲಿಕಾರ್ಜುನ ಖರ್ಗೆ ಲಾಬಿ ನಡೆಸಿದ್ದು, ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಪ್ರಿಯಾಂಕ್ ಖರ್ಗೆಗೆ ಸಿಗಲಿದೆ ಎನ್ನಲಾಗುತ್ತಿದೆ.

ಇನ್ನು ಪ್ರಿಯಾಂಕ್ ಖರ್ಗೆಗೆ ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಇಲಾಖೆಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದ್ದು, ಅಜಯ್ ಸಿಂಗ್ ಇದನ್ನು ಪ್ರಶ್ನಿಸಿದ್ದಾರೆ. ಸಚಿವ ಸ್ಥಾನವೂ ನಿಮಗೆ, ಪ್ರಾಧಿಕಾರದ ಅಧ್ಯಕ್ಷ ಸ್ಥಾನವೂ ನಿಮಗೇ ಅಂದ್ರೆ ನಾವೇನು ಮಾಡಬೇಕು? ಪ್ರಿಯಾಂಕ್ ಖರ್ಗೆ ಈಗಲೇ ಎರಡನೇ ಬಾರಿ ಸಚಿವರು, ಬಂಡೆಪ್ಪ ಕಾಶೆಂಪೂರ್ ಕೂಡ ಅಷ್ಟೇ. ಇನ್ನು ವೆಂಕಟರಾವ್ ನಾಡಗೌಡ ಜೆಡಿಎಸ್ ನವರು ಹಾಗೂ ರಾಜಶೇಖರ ಪಾಟೀಲ್ ಹುಮ್ನಾಬಾದ್ ಕಾಂಗ್ರೆಸ್ ಪಕ್ಷದವರಾಗಿದ್ದು, ಮೊದಲ ಬಾರಿ ಸಂಪುಟ ಸೇರಿದ್ದಾರೆ. ನಮ್ಮ ತಂದೆಯವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಾನು ಈಗ ಎರಡನೇ ಬಾರಿ ಆಯ್ಕೆಯಾಗಿದ್ದೇನೆ. ಪ್ರಾಂತ್ಯ ಮತ್ತು ಸಮುದಾಯದ ಆಧಾರದ ಮೇಲೆ ನನಗೇ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಎನ್ನುತ್ತಿದ್ದಾರೆ.

ಸದ್ಯ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ v/s ಅಜಯ್ ಸಿಂಗ್ ಮಧ್ಯೆ ಬಿಗ್ ಫೈಟ್ ಎದುರಾಗಿದ್ದು, ಇಬ್ಬರಲ್ಲಿ ಯಾರಿಗೆ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವರವಾಗಿ ಒಲಿದು ಬರುತ್ತೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ವಿಶೇಷ ವರದಿ : ಪಿ. ಮಧುಸೂಧನ್

ನಿಮ್ಮ ಸಲಹೆ, ಸೂಚನೆ, ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv