ದುಬಾರೆ ಶಿಬಿರದಲ್ಲಿ ‘ಖಾಸಗಿ ಬೋಟ್’ಗಳಿಗೆ ನಿಷೇಧ..!

ಕೊಡಗು: ಕೊಡಗು ಜಿಲ್ಲೆಯ ಪ್ರವಾಸಿ ತಾಣ ದುಬಾರೆಯ ಪ್ರಮುಖ ಆಕರ್ಷಣೆ ಅಂದ್ರೆ ಱಫ್ಟಿಂಗ್ ಮತ್ತು ಬೋಟಿಂಗ್. ಆದ್ರೆ ಕೆಲವು ತಿಂಗಳ ಹಿಂದೆ ಱಫ್ಟಿಂಗ್ ಸಿಬ್ಬಂದಿ ಹಾಗೂ ಪ್ರವಾಸಿಗರ ನಡುವೆ ನಡೆದ ಮಾರಾಮಾರಿಯಿಂದ ಜಿಲ್ಲಾಡಳಿತ ಱಫ್ಟಿಂಗ್‍ಗೆ ನಿಷೇಧಿಸಿತ್ತು. ಇದೀಗ ಪ್ರವಾಸಿಗರನ್ನು ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಕರೆದೊಯ್ಯುತ್ತಿದ್ದ ಖಾಸಗಿ ಮೋಟಾರ್ ಬೋಟ್‍ಗಳಿಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ.
ಯಾಕೆ ನಿಷೇಧ..?
ಬೋಟ್‍ಗಳ ಓಡಾಟದಿಂದ ನದಿಯ ದಡ ಅಗಲವಾಗ್ತಿದೆ. ನದಿ ಮಧ್ಯೆ ಇರುವ ಸಣ್ಣ ಸಣ್ಣ ದ್ವೀಪಗಳಿಗೂ ಹಾನಿಯಾಗುತ್ತದೆ. ನದಿಗೆ ಬರುವ ಸಾಕಾನೆಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಅರಣ್ಯ ಇಲಾಖೆ ಹೇಳಿದೆ. ಅಲ್ಲದೇ ಬೋಟ್‍ಗಳನ್ನು ನಡೆಸುತ್ತಿರುವ ಮಾಲೀಕರ ಬಳಿ ಸೂಕ್ತ ದಾಖಲೆಗಳೂ ಸಹ ಇಲ್ಲ ಹೀಗಾಗಿ ಮೋಟಾರ್ ಬೋಟ್​ಗಳಿಗೆ ನಿಷೇಧ ಹೇರಲಾಗಿದೆ ಎಂದು ಅರಣ್ಯ ಇಲಾಖೆ ಸಮರ್ಥನೆ ಮಾಡಿಕೊಂಡಿದೆ.
ಬೋಟ್ ಮಾಲೀಕ ರತೀಶ್ ಈ ಕುರಿತು ಪ್ರತಿಕ್ರಿಯಿಸಿ, ಬೋಟಿಂಗ್ ನಡೆಸಲು ಬೇಕಾದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಈ ವರ್ಷ ಅಂತ್ಯದವರೆಗೆ ಬೋಟಿಂಗ್ ನಡೆಸಲು ಲೈಸನ್ಸ್ ನವೀಕರಿಸಿಕೂಂಡಿದ್ದೇವೆ. ಲೈಸೆನ್ಸ್ ಇದ್ದರೂ ಕೂಡಾ ನಿಷೇಧ ಹೇರಿರುವುದು ಅಚ್ಚರಿ ಮೂಡಿಸಿದೆ. ಜೊತೆಗೆ ನಮ್ಮ ಆದಾಯ ಗಳಿಕೆಗೂ ಹೊಡೆತ ಬಿದ್ದಿದೆ ಎಂದರು. ದುಬಾರೆ ಸಾಕಾನೆ ಶಿಬಿರದಲ್ಲಿ ಬೋಟಿಂಗ್ ನಿಷೇಧದಿಂದ ಪ್ರವಾಸಿಗರಿಗೆ ಮತ್ತು ಲಕ್ಷಾಂತರ ರೂ. ಬಂಡವಾಳ ಹೂಡಿ ಬೋಟಿಂಗ್ ಉದ್ದಿಮೆ ಆರಂಭಿಸಿದವರಿಗೂ ಸಮಸ್ಯೆಯಾಗುತ್ತಿದೆ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಲಿ ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv