ಜೈಲರ್​ಗೆ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಭೂಪ!

ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿ ಬಿದ್ದರೆ ಆ ಕಾಪಿ ಚೀಟಿ ನುಂಗಿರೋದನ್ನ ಕೇಳಿದ್ದೇವೆ. ಇನ್ನು ಹೆಚ್ಚಂದ್ರೆ ಚಿಕ್ಕ ಮಕ್ಕಳು ಆಟವಾಡುವಾಗ ಕೈಯಲ್ಲಿದ್ದ ಚಿಲ್ಲರೆ ಹಣ ನುಂಗಿರೋದನ್ನ ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ಭೂಪ, ಮೊಬೈಲ್​ ಮಾತನಾಡುವಾಗ ಸಿಕ್ಕಿಬಿದ್ದೆ ಅಂತಾ ಮೊಬೈಲ್​ ಅನ್ನೇ ನುಂಗಿದ್ದಾನೆ. ಕೇಳೋಕೆ ಸ್ವಲ್ಪ ವಿಚಿತ್ರ ಅನ್ನಿಸಿದ್ರ್ರೂ ಸತ್ಯ..!
ಕೊಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನ ಕೈದಿ ರಾಮಚಂದ್ರಪ್ಪ ಮೊಬೈಲ್​ ನುಂಗಿದ ಭೂಪ. ಕಳೆದ ಒಂದು ವರ್ಷ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರಾಮಚಂದ್ರಪ್ಪ ಜೈಲಿನೊಳಗೆ ಅಕ್ರಮವಾಗಿ ಮೊಬೈಲ್​ ಬಳಕೆ ಮಾಡುತ್ತಿದ್ದ. ವಿಷಯ ಜೈಲರ್​ ಆತನನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯಲು ಕಾದಿದ್ದರು. ಸೋಮವಾರ ಮಧ್ಯಾಹ್ನ ಊಟದ ಸಮಯದಲ್ಲಿ ಕೈದಿ ರಾಮಚಂದ್ರಪ್ಪ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ವಿಷಯ ತಿಳಿದ ಜೈಲರ್​ ಆತನನ್ನು ಹಿಡಿಯಲು ಹೋಗಿದ್ದಾರೆ. ಕೈದಿ ರಾಮಚಂದ್ರಪ್ಪ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ತಪ್ಪಿಸಿಕೊಳ್ಳಲಾಗದ ಕಾರಣ ಬೇರೆ ದಾರಿ ಕಾಣದೆ ಮಾತನಾಡುತ್ತಿದ್ದ ಮೊಬೈಲ್​ ಅನ್ನೇ ನುಂಗಿದ್ದಾನೆ. ಸ್ವಲ್ಪ ಸಮಯದ ನಂತರ ತೀವ್ರ ಹೊಟ್ಟೆ ನೋವಿನಿಂದ ನರಳಲು ಆರಂಭಿಸಿದ್ದ, ತಕ್ಷಣ ಆತನನ್ನು ಪಕ್ಕದ ಎಸ್​ಎಸ್​ಕೆಎಂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಎಕ್ಸ್​ರೇ ಮಾಡಿ ನೋಡಿದಾಗ ಆತನ ಹೊಟ್ಟೆಯಲ್ಲಿ ಮೂರು ಇಂಚಿನ ಮೊಬೈಲ್​ ಫೋನ್​ ಇರುವುದು ಪತ್ತೆಯಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ನಗರದ ಎಂಆರ್​ ಬಾಂಗೂರು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಅಲ್ಲಿನ ವೈದ್ಯರು ಆತ ಪ್ರಯತ್ನಿಸಿದ್ರೆ ಬಹಿರ್ದೆಸೆ ಮೂಲಕ ಮೊಬೈಲ್​ ಹೊರಬರ ಬಹುದು. ಹಾಗೊಂದು ವೇಳೆ ಬರದಿದ್ದರೆ ಸರ್ಜರಿ ಮೂಲಕ ಹೊರ ತೆಗೆಯ ಬೇಕಾಗುತ್ತದೆ ಅಂತಾ ಮಾಹಿತಿ ನೀಡಿದ್ದಾರೆ.
ಜೈಲಿನೊಳಗೆ ಮೊಬೈಲ್​ ಬಂದಿದ್ದು ಹೇಗೆ?
ಜೈಲಿನಲ್ಲಿರುವ ಕೈದಿಗಳಿಗೆ ಹೊರಜಗತ್ತಿನ ಹಾಗೂ ಭೂಗತಲೋಕದ ಸಂಪರ್ಕ ಕಡಿತಗೊಳಿಸಲು ಕಾರಾಗೃಹ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಕೈದಿಗಳ ಮೊಬೈಲ್ ಮಾತುಕತೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಜೈಲ್​ ಡಾಕ್ಟರ್​ ಆಗಿದ್ದ ಅಮಿತಾವ್​ ಚೌಧರಿ ಅಲ್ಲಿನ ಕೈದಿಗಳಿಗೆ ಮೊಬೈಲ್​, ಡ್ರಗ್ಸ್​, ಮದ್ಯ, ಇನ್ನಿತ ಮಾದಕ ವಸ್ತುಗಳನ್ನು ರವಾನಿಸುತ್ತಿದ್ದ. ಸದ್ಯ ರಾಮಚಂದ್ರನ ವಿಚಾರಣೆ ವೇಳೆ ಈ ವಿಷಯ ಬಯಲಾಗಿದ್ದು, ಕಾರಾಗೃಹ ವೈದ್ಯ ಅಮಿತಾವ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ಆತನಿಂದ 35 ಮೊಬೈಲ್ಸ್​, ಚಾರ್ಜರ್ಸ್​, ಹಾಗೂ ಕೆಲವು ಕೆಜಿಗಳಷ್ಟು ಗಾಂಜಾ ಹಾಗೂ ಮದ್ಯ ವಶಕ್ಕೆ ಪಡೆಯಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv